
ಹುಬ್ಬಳ್ಳಿ: ತೀವ್ರಗೊಳ್ಳುತ್ತಿರುವ ಬಿಸಿಗಾಳಿಯ ಹೊಡೆತದ ನಡುವೆ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕಿಮ್ಸ್/KMCRI ಮಹತ್ವದ ಕ್ರಮ ಕೈಗೊಂಡಿದೆ. ಸಂಸ್ಥೆಯಲ್ಲಿ 14 ಹಾಸಿಗೆಗಳಿರುವ ಸುಸಜ್ಜಿತ, ಹವಾನಿಯಂತ್ರಿತ ಹೀಟ್ ಸ್ಟ್ರೋಕ್ ವಿಶೇಷ ವಾರ್ಡ್ ಆರಂಭಿಸಲಾಗಿದ್ದು, ಬಿಸಿಗಾಳಿಯಿಂದ ಬಳಲುವ ರೋಗಿಗಳಿಗೆ ತ್ವರಿತ ಚಿಕಿತ್ಸೆ ಒದಗಿಸಲು ಸಿದ್ಧತೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಏರುತ್ತಿರುವ ಉಷ್ಣಾಂಶ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬಿಸಿ ಗಾಳಿ, ಧಗೆಯಿಂದಾಗಿ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡು ಮುನ್ನೆಚ್ಚರಿಕಾ ಕ್ರಮವಾಗಿ ಈ ವಿಶೇಷ ವಾರ್ಡ್ ಸ್ಥಾಪಿಸಲಾಗಿದೆ.
ವಾರ್ಡ್ನಲ್ಲಿ ಒಆರ್ಎಸ್, ಐಸ್ ಕ್ಯೂಬ್ಗಳು, ಥರ್ಮಾಮೀಟರ್ಗಳು, ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಪರಿಣತಿ ಹೊಂದಿದ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೀವ್ರ ಲಕ್ಷಣಗಳು ಕಂಡುಬಂದಲ್ಲಿ ಜನರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಿಮ್ಸ್ ಆಡಳಿತ ಮನವಿ ಮಾಡಿದೆ.
ಉಷ್ಣತೆಯ ಅಬ್ಬರದ ನಡುವೆ, ಈ ಕ್ರಮವು ಜೀವ ರಕ್ಷಕ ವೈದ್ಯಕೀಯ ವ್ಯವಸ್ಥೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ.




