ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸಿದ ರಾಯಣ್ಣ ಅಭಿಮಾನಿ ಬಳಗ

ಹುಬ್ಬಳ್ಳಿ: “ಜೀವ ಅಮೂಲ್ಯ, ಸಮಸ್ಯೆಗಳು ತಾತ್ಕಾಲಿಕ, ಬದುಕು ಅಮೂಲ್ಯವಾದದ್ದು” ಎಂಬ ಸಂದೇಶದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ (ರಿ.) ವತಿಯಿಂದ ಅದರಗುಂಚಿಯ ಸಿ.ಐ.ಸಿ. ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.
‘ಹೊಸ ಯುಗ–ಹೊಸ ಅಧ್ಯಾಯ’ ಹಾಗೂ ‘ಯುವಕರ ನಡೆ ಗ್ರಾಮದ ಕಡೆ’ ಎಂಬ ಆಶಯದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆ, ಮಾನಸಿಕವಾಗಿ ಕುಗ್ಗಿರುವವರಿಗೆ ಧೈರ್ಯ ತುಂಬುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ಬೆಂಬಲ ನೀಡುವ ಕುರಿತು ಜಾಗೃತಿ ಮೂಡಿಸಲಾಯಿತು. “ಬದುಕನ್ನು ಆಯ್ಕೆ ಮಾಡೋಣ, ಬದುಕಿಗೆ ಬೆಂಬಲವಾಗಿ ನಿಲ್ಲೋಣ” ಎಂಬ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಸುರೇಶ ಗೋಕಾಕ ಮಾತನಾಡಿದರು. ಇದೇ ವೇಳೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿಯೊಂದು ಮನೆಯ ಮೇಲೂ ಕನ್ನಡ ಧ್ವಜ ಹಾರಿಸುವಂತೆ ಕರೆ ನೀಡಿದರು.
ಸಂಸ್ಥೆಯ ಮುಖ್ಯಸ್ಥ ಆರ್.ಎಫ್. ಬರಮಗೌಡ್ರ, ಪ್ರಾಚಾರ್ಯ ಸಾವಿತ್ರಿ ಉಣಕಲ್, ರಾಘವೇಂದ್ರ ಗೋವಿಂದಪ್ಪನವರ, ಮಂಜುನಾಥ ಹರ್ಜಪ್ಪನವರ, ಚೇತನ ಪಾಟೀಲ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




