
ಬೆಟಗೇರಿ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ಜವಾಬ್ದಾರಿಯ ಪ್ರಜ್ಞೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಅತ್ಯಂತ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಅನಂತ ಎಸ್. ಕಾರ್ಕಳ ಹೇಳಿದರು.

ಬೆಟಗೇರಿಯ ಎಸ್.ಎಸ್.ಕೆ. ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಶ್ರೀಮತಿ ಎಲ್.ಎನ್. ಬದಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಪ್ರಮಾಣವಚನ ಸ್ವೀಕಾರ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲಾ ಸಂಸತ್ತು ಮಕ್ಕಳಿಂದಲೇ ರೂಪುಗೊಂಡು, ಮಕ್ಕಳ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗೆ ಧ್ವನಿಯಾಗುವುದರ ಜೊತೆಗೆ ಸಂವಹನ ಕೌಶಲ್ಯ, ಭಾಷಣ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಶಾಲಾ ಸಂಸತ್ತಿನ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಗದಗ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪತ್ರಕರ್ತ ಆನಂದಯ್ಯ ವಿರಕ್ತಮಠ ಮಾತನಾಡಿ, ವಿದ್ಯಾರ್ಥಿಗಳು ಪ್ರಧಾನಮಂತ್ರಿ, ಶಿಕ್ಷಣ ಸಚಿವ, ಕ್ರೀಡಾ ಸಚಿವ ಸೇರಿದಂತೆ ವಿವಿಧ ಸಚಿವ ಸ್ಥಾನಗಳ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಆಡಳಿತಾತ್ಮಕ ಅನುಭವ ಹಾಗೂ ನಾಯಕತ್ವದ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಜ್ಞಾನವೂ ವಿದ್ಯಾರ್ಥಿಗಳಿಗೆ ದೊರೆಯುತ್ತದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ವಿ. ಬಸವಾ ಮಾತನಾಡಿ, ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳು ಶಾಲೆಯ ಸ್ವಚ್ಛತೆ, ಶಿಸ್ತು, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸುವುದರಿಂದ ಶಾಲೆಯ ಆಡಳಿತ ಸುಗಮವಾಗುವುದರ ಜೊತೆಗೆ ಸೇವಾ ಮನೋಭಾವ ಮತ್ತು ಜವಾಬ್ದಾರಿಯ ಅರಿವು ಬೆಳೆಯುತ್ತದೆ ಎಂದು ಹೇಳಿದರು.
ಶಾಲೆಯ ಅಧ್ಯಕ್ಷ ಲೋಕನಾಥ ಕಬಾಡಿ ಮಾತನಾಡಿ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಸ್ಪೀಕರ್ ಆಗಿ ಕು. ಜಯಶ್ರೀ ವಿ. ಗೋಟೂರ ಹಾಗೂ ಪ್ರೆಸಿಡೆಂಟ್ ಆಗಿ ಕು. ಶ್ರೇಯಾ ಟಿ. ಭಾಂಡಗೆ ಸೇರಿದಂತೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದತ್ತುಸಾ ಪವಾರ, ಎಸ್.ಎಸ್.ಕೆ. ತರುಣ ಸಂಘದ ಅಧ್ಯಕ್ಷ ಶ್ರೀರಾಮ ಹಬೀಬ, ಶ್ರೀ ಜಗದಂಬಾ ಮಹಿಳಾ ಮಂಡಳದ ಅಧ್ಯಕ್ಷೆ ರೂಪಾ ಮಿಸ್ಕಿನ್, ಮುಖ್ಯೋಪಾಧ್ಯಾಯ ಸಿ.ಎಸ್. ಹವಳದ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿನಿ ಐಶಾ ಓಡೆಕರ್ ಸ್ವಾಗತಿಸಿದರು. ಪ್ರಾಂಶುಪಾಲೆ ಶ್ರೀಮತಿ ಎಸ್.ಡಿ. ಬೆನಕಲ್ ವಂದಿಸಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು.




