
ಗದಗ: ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸುವುದರ ಜತೆಗೆ ಸರ್ಕಾರಿ ಜಯಂತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಗದಗದ ನ್ಯಾಯವಾದಿ ಟಿ.ಎನ್. ಭಾಂಡಗೆ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಐವರು ಪ್ರಮುಖರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಸಹಸ್ರಾರ್ಜುನ ಮಹಾರಾಜರ ಜಯಂತಿಗೆ ರಾಜ್ಯಮಟ್ಟದ ಸರ್ಕಾರಿ ಮಾನ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.
ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಆರಾಧ್ಯ ಮಹಾಪುರುಷರಾಗಿರುವ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸಮಾಜದ ವತಿಯಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ. ಈ ಆಚರಣೆಗೆ ಸರ್ಕಾರದ ಅಧಿಕೃತ ಮಾನ್ಯತೆ ದೊರೆತು ರಾಜ್ಯಾದ್ಯಂತ ಸರ್ಕಾರಿ ಗೌರವದೊಂದಿಗೆ ಆಚರಿಸಬೇಕೆಂಬುದು ಸಮಾಜದ ಬಹುದಿನಗಳ ಬೇಡಿಕೆಯಾಗಿದೆ.
ಪುರಾಣಗಳ ಪ್ರಕಾರ, ಹೈಹಯ ವಂಶದ ಕೃತವೀರ್ಯ ಮಹಾರಾಜರ ಪುತ್ರರಾದ ಸಹಸ್ರಾರ್ಜುನರು ಕಾರ್ತವೀರ್ಯ ಅರ್ಜುನ ಹಾಗೂ ಸಹಸ್ರಬಾಹು ಎಂಬ ಹೆಸರುಗಳಿಂದಲೂ ಪ್ರಸಿದ್ಧರಾಗಿದ್ದಾರೆ. ಭಗವಾನ್ ದತ್ತಾತ್ರೇಯರ ಅನುಗ್ರಹ ಪಡೆದ ಮಹಾಪುರುಷರೆಂದು ಪೌರಾಣಿಕ ಕಥನಗಳಲ್ಲಿ ಉಲ್ಲೇಖಿಸಲಾಗಿದೆ. ನರ್ಮದಾ ನದಿ ತೀರದ ಮಾಹಿಷ್ಮತಿ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿಯಾಗಿ ಅವರು ಪ್ರಸಿದ್ಧರಾಗಿದ್ದಾರೆ.
ಸಹಸ್ರಾರ್ಜುನ ಮಹಾರಾಜರು ಸಮಾಜದ ಧಾರ್ಮಿಕ ನಂಬಿಕೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿದ್ದಾರೆ. ಅವರ ಜಯಂತಿಗೆ ಸರ್ಕಾರಿ ಮಾನ್ಯತೆ ದೊರೆತರೆ ಮಹಾರಾಜರ ಜೀವನಗಾಥೆ ಮತ್ತು ಐತಿಹಾಸಿಕ, ಪೌರಾಣಿಕ ಮಹತ್ವವನ್ನು ರಾಜ್ಯದ ಜನತೆಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿವರ್ಷ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸರ್ಕಾರಿ ಜಯಂತಿ ಆಚರಿಸುವುದು, ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾರ್ಯಕ್ರಮ ಆಯೋಜಿಸುವುದು, ಜಯಂತಿ ಆಚರಣೆಗೆ ಅಧಿಕೃತ ಮಾರ್ಗಸೂಚಿ ರೂಪಿಸುವುದು ಹಾಗೂ ಮಹಾರಾಜರ ಜೀವನಗಾಥೆ ಕುರಿತು ಪುಸ್ತಕ ಮತ್ತು ಮಾಹಿತಿ ಸಾಮಗ್ರಿಗಳನ್ನು ಪ್ರಕಟಿಸುವಂತೆ ಮನವಿ ಮಾಡಲಾಗಿದೆ.
ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಭಾಷಣ ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸಬೇಕು. ಜಯಂತಿ ಆಚರಣೆಯ ರೂಪುರೇಷೆ ಸಿದ್ಧಪಡಿಸುವಾಗ ಸಮಾಜದ ರಾಜ್ಯಮಟ್ಟದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಆಡಳಿತಾತ್ಮಕ ಸಹಕಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸರ್ಕಾರಿ ಜಯಂತಿಗಳ ಪಟ್ಟಿಗೆ ಸೇರ್ಪಡೆಗೊಳಿಸಿ, ರಾಜ್ಯಾದ್ಯಂತ ಅಧಿಕೃತವಾಗಿ ಆಚರಿಸಲು ಸರ್ಕಾರ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯವಾದಿ ಟಿ.ಎನ್. ಭಾಂಡಗೆ ಆಗ್ರಹಿಸಿದ್ದಾರೆ.




