
ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಪಿಡಿಓ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ರೋಣ ತಾಲ್ಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮ ಪಂಚಾಯಿತಿಗಳ ಪಿಡಿಓ ಆಗಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಎಂದು ಗುರುತಿಸಲಾಗಿದೆ.
ಮೂಲತಃ ಧಾರವಾಡ ಜಿಲ್ಲೆಯವರಾದ ಮಕ್ತುಂಹುಸೇನ ಅವರು, ಕಳೆದ ತಿಂಗಳಷ್ಟೇ ಕೊತಬಾಳ ಪಂಚಾಯಿತಿಗೆ ಪಿಡಿಓ ಆಗಿ ಅಧಿಕಾರ ವಹಿಸಿಕೊಂಡಿದ್ದರು. 2022-23ನೇ ಸಾಲಿನಲ್ಲಿ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ನಂತರ ಅವರು ಅಮಾನತ್ತಾಗಿದ್ದರು. ಬಳಿಕ ಇಲಾಖೆಯಿಂದ ಗದಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.
ಲೋಕಾಯುಕ್ತ ದಾಳಿ, ಅಮಾನತ್ತು ಹಾಗೂ ನಿರಂತರ ವರ್ಗಾವಣೆಯಿಂದ ಮನೋಭಾರಕ್ಕೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಮಂಗಳವಾರ ರಾತ್ರಿ ರೋಣ ಪಟ್ಟಣದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಅವರು ಜೀವನ ಅಂತ್ಯಗೊಳಿಸಿದ್ದಾರೆ.
ಎರಡು ದಿನಗಳಿಂದ ಪತ್ನಿಯ ಕರೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಪತ್ನಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಮನೆ ಮಾಲೀಕರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ತಿಳಿಯಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಅಧಿಕಾರಿಗಳ ಮೇಲಿರುವ ಮಾನಸಿಕ ಒತ್ತಡದ ಗಂಭೀರತೆಯನ್ನು ಮತ್ತೊಮ್ಮೆ ಬಯಲಿಗೆಳೆಯುವಂತಾಗಿದೆ.




