
ಧಾರವಾಡ:
ಸರ್ಕಾರಿ ಆಸ್ಪತ್ರೆಗಳೆಂದರೆ ಜನಸಂದಣಿ, ಕಾರ್ಯ ಒತ್ತಡ, ಸೌಲಭ್ಯಗಳ ಕೊರತೆ ಇವೆಲ್ಲದರ ನಡುವೆಯೂ ಬಡ ರೋಗಿಗಳಿಗೆ ಆತ್ಮೀಯತೆಯಿಂದ ಸ್ಪಂದಿಸಿ, ಸೇವೆಯನ್ನೇ ಬದುಕಿನ ಧ್ಯೇಯವನ್ನಾಗಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವಗಳಲ್ಲಿ ಧಾರವಾಡ ಜಿಲ್ಲಾಸ್ಪತ್ರೆಯ ಶುಶೂಷಾಧಿಕಾರಿ ಸುನೀತಾ ನಾಯ್ಕ ಪ್ರಮುಖರು.
ಬಡವರ ನೋವಿಗೆ ಹೃದಯ ಮಿಡಿಯುವ ಸುನೀತಾ ನಾಯ್ಕ ಅವರು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯನ್ನೂ ತಮ್ಮ ಮನೆಯವರಂತೆ ಕಾಣುತ್ತಾರೆ. ರೋಗಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಅವರಿಗೆ ಅಗತ್ಯವಾದ ಚಿಕಿತ್ಸೆ, ಔಷಧೋಪಚಾರ ಹಾಗೂ ಧೈರ್ಯ ತುಂಬುವ ಮಾತುಗಳ ಮೂಲಕ ಹೊಸ ಬದುಕಿನ ಭರವಸೆ ನೀಡುತ್ತಾರೆ. ಅವರ ಈ ಮಾನವೀಯ ಸ್ಪರ್ಶವೇ ಸಾವಿರಾರು ಬಡ ರೋಗಿಗಳ ಬದುಕಿಗೆ ಆಶಾಕಿರಣವಾಗಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾದ ಸುನೀತಾ ನಾಯ್ಕ ಅವರು ದಾಂಡೇಲಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ತಂದೆಯ ಕನಸಿನಂತೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ನರ್ಸಿಂಗ್ ಶಿಕ್ಷಣ ಪಡೆದರು. ಬಳಿಕ ಕಳೆದ ಎರಡು ದಶಕಗಳಿಂದ ಆರೋಗ್ಯ ಸೇವೆಯಲ್ಲಿ ತೊಡಗಿ ಅನೇಕ ಜೀವಗಳಿಗೆ ನವಚೈತನ್ಯ ತುಂಬಿದ್ದಾರೆ.
ಚಿಕ್ಕೋಡಿಯಲ್ಲಿ ಸೇವಾ ಪಯಣ ಆರಂಭಿಸಿದ ಅವರು, ಬಳಿಕ ಹುಬ್ಬಳ್ಳಿಯ ಕಿಮ್ಸ್, ಗರಗ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇದೀಗ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಕರ್ತವ್ಯ ನಿರ್ವಹಣೆಗೆ ಸೀಮಿತವಾಗದೇ, ಅಪರಿಚಿತ ಬಡ ರೋಗಿಗಳಿಗೆ ವೈಯಕ್ತಿಕವಾಗಿ ನೆರವಾಗಿ ಚಿಕಿತ್ಸೆ ದೊರಕಿಸಿಕೊಟ್ಟ ಅನೇಕ ಉದಾಹರಣೆಗಳು ಅವರ ಸೇವಾಭಾವಕ್ಕೆ ಸಾಕ್ಷಿಯಾಗಿವೆ.
ಸುನೀತಾ ಅವರು ಸೇವೆಯಷ್ಟೇ ಅಲ್ಲ, ಸಂಘಟನಾ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಕಿಮ್ಸ್ ತುರ್ತು ಚಿಕಿತ್ಸಾ ವಿಭಾಗದ ಪ್ರಭಾರಿಯಾಗಿ, ಸರ್ಕಾರಿ ಶುಶೂಷಾಧಿಕಾರಿಗಳ ಸಂಘದ ಅಧ್ಯಕ್ಷೆಯಾಗಿ, ಸಿಬ್ಬಂದಿ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸಿ ಸಹೋದ್ಯೋಗಿಗಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯ ಕುರಿತ ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಅವರ ಸೇವಾ ಸಮರ್ಪಣೆಗೆ 2022ರ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, 2019ರ ಪ್ರತಿಷ್ಠಿತ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗಲ್ ನರ್ಸಸ್ ಅವಾರ್ಡ್, 2025ರ ಪ್ರೇಮ್ಜಿ ಅಚೀವರ್ಸ್ ಅವಾರ್ಡ್ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಬಿಳಿ ಉಡುಪಿನಲ್ಲಿ ಸೇವೆಯ ಸಂದೇಶ ಸಾರುತ್ತಾ, ಬಡವರ ಪಾಲಿನ ದೇವತೆಯಾಗಿ, ಆರೋಗ್ಯ ಕ್ಷೇತ್ರದಲ್ಲಿ ಮಾನವೀಯತೆಯ ಹೊಸ ಅಧ್ಯಾಯ ಬರೆದಿರುವ ಸುನೀತಾ ನಾಯ್ಕ ಅವರ ಬದುಕು ಇಂದಿನ ಯುವ ಪೀಳಿಗೆಗೆ ಪ್ರೇರಣೆಯ ದೀಪವಾಗಿದೆ.
ವೃತ್ತಿಯನ್ನು ಉದ್ಯೋಗವಲ್ಲ, ಸೇವೆಯೆಂದು ಕಂಡುಕೊಂಡ ಸುನೀತಾ ನಾಯ್ಕ ಅವರು ನಿಜಕ್ಕೂ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಆಶಾಕಿರಣ.




