
ಬೆಂಗಳೂರು: ಮಂಡ್ಯ ಅಬಕಾರಿ ಇಲಾಖೆಯಲ್ಲಿ ಲಂಚಾವತಾರದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸಿಎಲ್-7 ಬಾರ್ ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್-7 ಬಾರ್ ತೆರೆಯಲು ಸುಂದರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಲೈಸೆನ್ಸ್ ನೀಡದೇ ಸಣ್ಣ-ಪುಟ್ಟ ಕಾರಣಗಳನ್ನು ಮುಂದಿಟ್ಟು ಪದೇ ಪದೇ ಅರ್ಜಿಯನ್ನು ವಜಾಗೊಳಿಸಲಾಗುತ್ತಿತ್ತು.
ನ್ಯಾಯಾಲಯದಿಂದ ಲೈಸೆನ್ಸ್ ನೀಡುವಂತೆ ಆದೇಶ ಬಂದರೂ ಸಹ ಅಬಕಾರಿ ಉಪ ಆಯುಕ್ತರು ಅದನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದರು. ಈ ನಡುವೆ ಲೈಸೆನ್ಸ್ ನೀಡಲು 60 ಲಕ್ಷ ರೂ. ಲಂಚ ನೀಡುವಂತೆ ನಾಗಶಯನ ಅವರು ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದರಿಂದ ಬೇಸತ್ತ ಸುಂದರ್ ಅವರು ಆಡಿಯೋ ಸಾಕ್ಷ್ಯಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಈ ವಿಚಾರದಲ್ಲಿ ಅವರು ನಿರಂತರ ಹೋರಾಟ ನಡೆಸುತ್ತಿದ್ದರು. ಈ ಪ್ರಕರಣ ವಿಧಾನಸಭೆಯಲ್ಲೂ ಚರ್ಚೆಗೆ ಕಾರಣವಾಗಿತ್ತು.
ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡು, ಲಂಚ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತ ನಾಗಶಯನ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.




