
ಮುಂಡಗೋಡ: ಪಟ್ಟಣದಲ್ಲಿ ಸರ್ಕಾರದ ನಿಯಮಗಳನ್ನು ಧಿಕ್ಕರಿಸಿ, ರಾತ್ರಿ 12 ಗಂಟೆಯ ನಂತರವೂ ಬಾರ್ಗಳು ತೆರೆದಿಟ್ಟುಕೊಂಡು ಮದ್ಯ ಮಾರಾಟ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ನಿಯಮಾವಳಿಯ ಪ್ರಕಾರ ನಿಗದಿತ ಸಮಯದ ನಂತರ ಮದ್ಯ ಮಾರಾಟ ಸಂಪೂರ್ಣ ನಿಷಿದ್ಧವಾಗಿದ್ದರೂ, ಕೆಲ ಬಾರ್ಗಳು ಯಾವುದೇ ಭಯವಿಲ್ಲದೆ ರಾತ್ರಿ ತಡವರೆಗೂ ಮದ್ಯ ಮಾರಾಟ ಮಾಡುತ್ತಿವೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ. “ನಿಯಮಗಳು ಕೇವಲ ಕಾಗದದಲ್ಲೇ ಉಳಿದಿವೆಯೇ?” ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಪ್ರಸ್ತುತ ಮುಂಡಗೋಡದಲ್ಲಿ ಮರಿಕಾಂಬಾ ಜಾತ್ರೆ ನಡೆಯುತ್ತಿದ್ದು, ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಬಾರ್ಗಳಲ್ಲಿ ಮದ್ಯಪ್ರೀಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಾರ್ಗಳಲ್ಲಿ ಮದ್ಯ ಸೇವಿಸದೇ ಹೊರಬರುವ ಕೆಲವರು ಪಾರ್ಸೆಲ್ ಪಡೆದು ಮನೆಗಳ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೀವ್ರ ಕಿರಿಕಿರಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂತಹ ಗಂಭೀರ ಕಾನೂನು ಉಲ್ಲಂಘನೆಗಳು ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. “ರಾತ್ರಿ 12ರ ನಂತರ ಮದ್ಯ ಮಾರಾಟ ನಡೆಯುತ್ತಿದ್ದರೂ ಪರಿಶೀಲನೆ ಯಾಕಿಲ್ಲ? ಇದು ಅಧಿಕಾರಿಗಳ ಕರ್ತವ್ಯವಲ್ಲವೇ?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆಯಲ್ಲೂ ಕಾನೂನು ಬಾಹಿರವಾಗಿ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಸಾರ್ವಜನಿಕ ಶಾಂತಿ ಭಂಗವಾಗುತ್ತಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.




