ಅಪರಾಧಜಿಲ್ಲೆ

ಉಳವಿ ಜಾತ್ರೆಯಲ್ಲಿ ಇಸ್ಪೀಟ್ ಅಡ್ಡೆಗಳಿಗೆ ಪೊಲೀಸ್ ದಾಳಿ 15 ಮಂದಿ ಬಂಧನ, 34,030 ನಗದು ವಶ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ಬಹಿರಂಗವಾಗಿ ನಡೆಯುತ್ತಿದ್ದ ‘ಅಂದರ್–ಬಾಹರ್’ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಜೋಯಿಡಾ ಪೊಲೀಸರು ದಾಳಿ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ.

ಜಾತ್ರೆಯ ಸೋಗಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಾಜಾರೋಷವಾಗಿ ಜೂಜಾಟ ನಡೆಯುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜೋಯಿಡಾ ಪೊಲೀಸರು, ವಿಶೇಷ ತಂಡವನ್ನು ರಚಿಸಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಜೋಯಿಡಾ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಶ ಬಸಪ್ಪ ಮಾಳಿ ಅವರ ನೇತೃತ್ವದ ತಂಡ ಫೆಬ್ರವರಿ 01, 2026ರಂದು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 34,030 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸುಪ್ರಸಿದ್ಧ ಧಾರ್ಮಿಕ ಜಾತ್ರೆಯಂತಹ ಪವಿತ್ರ ಸಂದರ್ಭದಲ್ಲೇ ಇಂತಹ ಬಹಿರಂಗ ಜೂಜಾಟ ನಡೆಯುತ್ತಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭಕ್ತಾದಿಗಳು ಭಕ್ತಿ-ಭಾವದಿಂದ ಆಗಮಿಸುವ ಸ್ಥಳಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಲು ಪೊಲೀಸರು ಹಾಗೂ ಜಾತ್ರಾ ಮಹೋತ್ಸವ ಸಮಿತಿಗಳು ಮೊದಲೇ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಈಗಾಗಲೇ ಜಿಲ್ಲೆಯಲ್ಲಿ ಸಾಲುಸಾಲು ಐತಿಹಾಸಿಕ ಜಾತ್ರೆಗಳು ಆರಂಭಗೊಳ್ಳಲಿದ್ದು, ಎರಡು ವರ್ಷಕ್ಕೊಮ್ಮೆ ನಡೆಯುವ ವಿಶ್ವಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ, ಮೂರು ವರ್ಷಕ್ಕೊಮ್ಮೆ ನಡೆಯುವ ಯಲ್ಲಾಪುರ ಮಾರಿಕಾಂಬಾ ಜಾತ್ರೆ ಹಾಗೂ ಮುಂಡಗೋಡ ಮಾರಿಕಾಂಬಾ ಜಾತ್ರೆಗಳು ಕೆಲವೇ ದಿನಗಳಲ್ಲಿ ಆರಂಭವಾಗಲಿವೆ.

ಲಕ್ಷಾಂತರ ಭಕ್ತರು ಸೇರುವ ಈ ಮಹೋತ್ಸವಗಳಲ್ಲಿ ಉಳವಿ ಜಾತ್ರೆಯಂತಹ ಅಕ್ರಮ ಚಟುವಟಿಕೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹೇಗಿರಲಿದೆ? ಜೂಜಾಟ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಜಾತ್ರಾ ಸಮಿತಿಗಳು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿವೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಜೂಜುಕೋರರು ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಬಾರಿ ಜಾತ್ರೆಗಳು ಶಾಂತಿಯುತವಾಗಿ, ಕಾನೂನುಬದ್ಧವಾಗಿ ನಡೆಯಲಿ ಎಂಬುದೇ ಜಿಲ್ಲೆಯ ಸಾರ್ವಜನಿಕರ ಆಶಯವಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button