ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹತ್ಯೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಜರಂಗದಳ ಪ್ರತಿಭಟನೆ ನಡೆಸಲು ಸಂಘಟನೆ ಕರೆ ನೀಡಿದೆ. ಅದರಂತೆ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ. ಸರ್ಕಾರ ಆರೋಪಿಗಳನ್ನು ಬಂಧಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಬಡ ಮತ್ತು ಮಧ್ಯಮ ವರ್ಗದ ಯುವಕರ ಮೇಲೆ ನಿರಂತರವಾಗಿ ಹಲ್ಲೆ ಮಾಡುವ ಮೂಲಕ ಅವರ ಕುಟುಂಬಕ್ಕೆ ಆಸರೆಯಿಲ್ಲದಂತೆ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಶೀಘ್ರವೇ ಶಿಕ್ಷೆಯಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಕೃತ್ಯ ಎಸಗಿರುವ ಸಂಘಟನೆಯನ್ನು ಸರ್ಕಾರ ನಿಷೇಧ ಮಾಡಬೇಕೆಂದು ಒತ್ತಾಯಿಸಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಣ ಬೀಳಗಿ, ಅಶೋಕ ಅನ್ವೇಕರ್, ಅರುಣ ಶಾಮನೂರ, ಜಯಕರ್ ಕಟ್ಟಿ, ವಿಜಯ ಶಿರಸಾಗರ್, ಮಹಾವೀರ ಘೋಗಿ, ಗೋವರ್ಧನ ರಾವ್, ಸಂಜು ಬಡಾಸ್ಕರ್, ಅರುಣ ಶಾಮನೂರ, ಪ್ರಕಾಶ ಸೇರಿದಂತೆ ಮುಂತಾದವರು ಇದ್ದರು.