ಬೆಂಗಳೂರು-ಹುಬ್ಬಳ್ಳಿ ರೈಲು ಸಂಚಾರ ಬಂದ್, ಕೇಂದ್ರ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ
ಹುಬ್ಬಳ್ಳಿ: ಬೆಂಗಳೂರು – ಹುಬ್ಬಳ್ಳಿ ಸೂಪರ್ ಫಾಸ್ಟ್ ಟ್ರೈನ್ ಸಂಚಾರವನ್ನು ರದ್ದು ಮಾಡಿದ ಬೆನ್ನಲ್ಲೇ ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ದಿನಂಪ್ರತಿ ಜನದಟ್ಟಣೆಯಿಂದ ಸಂಚರಿಸುತ್ತಿದ್ದ ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ಟ್ರೈನ್’ನನ್ನು ಪ್ರಯಾಣಿಕರ ಕೊರತೆ ಕಾರಣಕ್ಕೆ ರೈಲ್ವೆ ಸಂಚಾರ ಬಂದ್ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿತ್ತು. ಇದೇ ವಿಷಯಕ್ಕೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹೊಸದುರ್ಗ ಯಾರ್ಡ್’ನಲ್ಲಿ ಕಾಮಗಾರಿ ಹಿನ್ನೆಲೆ ರೈಲು ಸಂಚಾರ ರದ್ದು ಮಾಡಲಾಗಿದೆ ಎಂದು ಟ್ವಿಟ್ ಮಾಡಿದ್ದು, ಇದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿತ್ತು.
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಕಾಂಗ್ರೆಸ್ ಈ ವಿಷಯವನ್ನು ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಪ್ರಭಾವ ಬಳಸಿ ಅವಳಿನಗರಕ್ಕೆ ಮೋಸ ಮಾಡಿ ರಾಜಸ್ಥಾನಕ್ಕೆ ರಾಜಕೀಯ ಲಾಭದ ದುರದ್ದೇಶದಿಂದ ರೈಲ್ವೆ ಇಲಾಖೆಯನ್ನು ಬಳಸಿಕೊಂಡಿದ್ದಾರೆ. ಅವರಿಗೆ ತಮ್ಮ ಕ್ಷೇತ್ರದ ಜನರಿಗಿಂತ ರಾಜಕಾರಣಕ್ಕಾಗಿ ಅಧಿಕಾರ ಬೇಕು, ಇಂತಹ ನಾಯಕರು ನಮಗೆ ಬೇಕೆ, ಪನೌತಿ ಜೋಶಿ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಕಿಡಿಕಾರಿದರು.
ಅಷ್ಟೇ ಅಲ್ಲದೇ ಸಾರ್ವಜನಿಕರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಸಚಿವರ ನಡೆಯನ್ನು ಖಂಡಿಸಿದರು.
ಇಂದು ಸಹ ಈ ವಿಷಯ ಚರ್ಚೆಯಲ್ಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜಿಲ್ಲೆಯ ಪ್ರವಾಸದಲ್ಲಿದ್ದು, ಅನೇಕ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮದ ಭೇಟಿಯನ್ನು ಸಚಿವರು ರದ್ದು ಪಡಿಸಿದ್ದಾರೆ. ಇದನ್ನು ಅವರ ಆಪ್ತ ಸಹಾಯಕರೇ ಮಾಹಿತಿ ನೀಡಿದ್ದು, ಇದು ಅನೇಕರ ಟೀಕೆಗೆ ಗುರಿಯಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆರೋಪಗಳು, ಟೀಕೆಗಳು ಬರುತ್ತಿದ್ದಂತೆ ಮಾಧ್ಯಮಗಳನ್ನು ದೂರಿಡುವ ಕೆಲಸ ಮಾಡುತ್ತಿದ್ದಾರೆ. ಇವರು ಸಹ ಪ್ರಧಾನಿ ನರೇಂದ್ರ ಮೋದಿ ಅವರ ಮಾಧ್ಯಮದ ನಡೆಯನ್ನು ಅನುಸರಿಸುತ್ತಿದ್ದಾರೆ ಇದು ಖಂಡನೀಯ ಎಂದು ರಜತ್ ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.