ಹುಬ್ಬಳ್ಳಿ: ಎಲ್ಲೆಡೆ ಲೋಕಸಭಾ ಚುನಾವಣೆ ಸದ್ದು ಜೋರಾಗಿದೆ. ಅದರಂತೆ ಟಿಕೆಟ್ ವಿಚಾರವಾಗಿ ಅಭ್ಯರ್ಥಿಗಳ ಓಡಾಟ ಕೂಡಾ ಹೆಚ್ಚಿದೆ. ಅದರಂತೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಲ್ಹಾದ್ ಜೋಶಿ ಕಣಕ್ಕಿಳಿದಿದ್ದಾರೆ. ಜೋಶಿ ವಿರುದ್ಧ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿರುವ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಪ್ರಲ್ಹಾದ್ ಜೋಶಿ ಈಗಾಗಲೇ ನಾಲ್ಕು ಬಾರಿ ಗೆದ್ದಿದ್ದಾರೆ. ಪುನರರಾಯ್ಕೆ ಬಯಸಿ ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಅಭ್ಯರ್ಥಿಯ ಹುಡುಕಾಟ ಕಾಂಗ್ರೆಸ್ ಬಹುದಿನಗಳಿಂದ ನಡೆದಿದೆ. ಅದರಲ್ಲೂ ಒಬಿಸಿಯೋ, ಲಿಂಗಾಯತ ಸಮುದಾಯವೋ ಎಂಬ ಜಿಜ್ಞಾಸೆ ಗೊಳಗಾಗಿರುವ ಕಾಂಗ್ರೆಸ್, ಮೋಹನ ಲಿಂಬಿಕಾಯಿ, ಶಿವಲೀಲಾ ಕುಲಕರ್ಣಿ, ರಜತ್ ಉಳ್ಳಾಗಡ್ಡಿಮಠ, ವಿನೋದ ಅಸೂಟಿ, ಲೋಹಿತ ನಾಯ್ಕರ, ಮಹೇಶ ನಾಲವಾಡ ಹೀಗೆ ನಾಲೈದು ಜನರ ಹೆಸರುಗಳನ್ನು ಇಟ್ಟುಕೊಂಡಿದೆ. ಇದೀಗ ಈ ಪಟ್ಟಿಗೆ ಡಾ.ಜಿ.ಎಸ್.ಮಾಲೀಪಾಟೀಲ್ ಹೆಸರು ಸೇರ್ಪಡೆಯಾಗಿದೆ.
ಡಾ.ಜಿ.ಎಸ್.ಮಾಲಿ ಪಾಟೀಲ್ ಕಾಂಗ್ರೆಸ್ಸಿನಲ್ಲೇ ನಿಷ್ಠಾವಂತ ಕಾರ್ಯಕರ್ತರಾಗಿದ್ದು. 45 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಜನರಿಗೆ ಭ್ರಷ್ಟಾಚಾರ ರಹಿತ, ಪಕ್ಷಾತೀತ, ಪಾರದರ್ಶಕ ಮತ್ತು ಸಮರ್ಥ ಆಡಳಿತ ನೀಡುವ ಉತ್ಸುಕತೆಯೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕಳೆದ ಏಳೆಂಟು ತಿಂಗಳಿನಿಂದ ಕೆಲಸ ಮಾಡಲು ಶುರು ಮಾಡಿದ್ದಾರೆ. ಟಿಕೆಟ್ ಕೊಡಿಸುವ ಭರವಸೆಯನ್ನು ಕೆಲವು ಹಿರಿಯ ಮುಖಂಡರು ನೀಡಿದ್ದಾರೆ.
ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ, ಇಂಡಿ, ಸಿಂಧಗಿ ವಿಧಾನಸಭೆ ಮತಕ್ಷೇತ್ರಕ್ಕೆ 1989, 1994, 1999, 2004, 2008, 2013, 2018, 2021 ಮತ್ತು 2023 ರಲ್ಲಿ ಕಾಂಗ್ರೆಸ್’ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಇದಲ್ಲದೇ ವಿಜಯಪುರ ಲೋಕಸಭಾ ಮತಕ್ಷೇತ್ರದಿಂದ 1996, 1998, 1999, 2004 ಇಸ್ವಿಯಲ್ಲಿ ಟಿಕೆಟ್ ಆಕಾಂಕ್ಷಿ ಕೂಡಾ ಆಗಿದ್ದರು. ಆದರೆ ಕೊನೆಗೆ ಕೆಲವು ಕಾರಣಾಂತರಗಳಿಂದ ಟಿಕೆಟ್ ಕೈತಪ್ಪಿವೆ.
ಈ ಮಧ್ಯೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲ ಹೆಚ್ಚಾಗಿದೆ. ಡಾ.ಜಿ.ಎಸ್.ಮಾಲಿಪಾಟೀಲ್ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರದ ಜನರೊಂದಿಗೆ ಸಂಪರ್ಕ ಹೊಂದಿದ್ದು, ಜಿಲ್ಲೆಯಲ್ಲಿ ಅಲಸ್ವಲ್ಪ ಹಿಡಿತ ಹೊಂದಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಒಳ್ಳೆಯ ಫೈಟ್ ಕೊಡಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸಿಗರಲ್ಲಿದೆ. ಈ ಹಿನ್ನೆಲೆಯಲ್ಲಿ ಡಾ.ಜಿ.ಎಸ್.ಮಾಲಿಪಾಟೀಲ್ ಅವರಿಗೆ ಧಾರವಾಡ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಯೋಚನೆ ಕೂಡ ಕಾಂಗ್ರೆಸ್ ಮುಖಂಡರಲ್ಲಿದೆ. ಈ ಸಂಬಂಧ ಒಂದೆರಡು ಬಾರಿ ಚರ್ಚೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ.