ಹುಬ್ಬಳ್ಳಿ: ನನ್ನ ರಾಜಕೀಯ ಇತಿಹಾಸದಲ್ಲಿ ಪ್ರಲ್ಹಾದ್ ಜೋಶಿಯವರಂತ ಮನುಷ್ಯನನ್ನು ನೊಡಿಲ್ಲ, ಅವರಂತಹ ದುಷ್ಟ, ನೀಚ ಕೆಲಸವನ್ನು ಯಾರು ಮಾಡೋದಿಲ್ಲ, ಜಿಲ್ಲೆಯಲ್ಲಿ ಒಬ್ಬರನ್ನು ಹಿಚುಕಿ ಹಿಟ್ಲರ್ ಆಡಳಿತ ಆಡಳಿತ ನಡೆಸಲಾಗುತ್ತಿದೆ. ಇದು ಅಂತ್ಯವಾಗಬೇಕು ಎಂದು ಶಾಸಕ ವಿನಯ ಕುಲಕರ್ಣಿ ನೇರಾನೇರವಾಗಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ.
ನಾ ಹಿಂದೆ ಜೈಲಿನಲ್ಲಿದ್ದಾಗ ಒಂಬತ್ತು ತಿಂಗಳು, ನನ್ನ ಡೈರಿಯಿಂದ ಹಾಲು ಮಾರಾಟಕ್ಕೆ ಜೋಶಿಯವರು ಅವಕಾಶ ಕೊಟ್ಟಿಲ್ಲ, ಹೀಗಾಗಿ ಕಬ್ಬಿನ ಹೊಲ, ಆ ಹೊಲ ಈ ಹೊಲದಲ್ಲಿ ಚೆಲ್ಲಿದ್ದೇವೆ. ಯಾರಿಗೆ ಬೇಕು ಅವರಿಗೆ ಹಾಲು ಹಂಚಿದ್ದೇವೆ. ರಾಜಕೀಯ ಇತಿಹಾಸದಲ್ಲಿಯೇ ಇಂತಹ ಮನುಷ್ಯನನ್ನು ನೋಡಿಲ್ಲ, ಇಷ್ಟು ದುಷ್ಟ ಕೆಲಸ, ನೀಚ್ ಕೆಲಸ ಯಾರು ಮಾಡೋದಿಲ್ಲ ಎಂದು ಹರಿಹಾಯ್ದಿದ್ದಾರೆ.
ನಾನು ಜೆ.ಹೆಚ್.ಪಟೇಲ್ ಅವರ ಕಾಲದಿಂದಲೂ ಹಿರಿಯ ನಾಯಕರೊಂದಿಗೆ ಸಂಬಂಧ ಹೊಂದಿದ್ದೇನೆ. ಇಂತಹ ರಾಜಕಾರಣದಲ್ಲಿ ಜೋಶಿ ಅಂತವರನ್ನು ನೋಡಿದಿಲ್ಲ, ಆದರೆ ಜನರು ಮೋದಿ, ಹಿಂದುತ್ವ ಎಂದು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಮತದಾರರಿಗೆ ಕಳಕಳಿಯಾಗಿ ವಿನಂತಿ ಮಾಡುತ್ತೇನೆ ಧಾರವಾಡ ಜಿಲ್ಲೆಯೊಂದು ಹೋದರೆ ಹೋಗಲಿ, ಆದರೆ ಪ್ರಲ್ಹಾದ್ ಜೋಶಿ ಅಂತವರಿಗೆ ಮತ ಹಾಕಬೇಡಿ, ಈಗಲೇ ತಿಳಿದುಕೊಳ್ಳಿ, ಇಲ್ಲಾ ಅಂದರೆ ನನ್ನ ಪರಿಸ್ಥಿತಿ ನಾಳೆ ನಿಮಗೂ ಬರಬಹುದು ಎಂದು ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ ಅವರದ್ದು ಹಿಟ್ಲರ್ ಸಂಸ್ಕೃತಿ, ಜೋಶಿ ಆಡಳಿತದ ಹಿಂದೆ ಕಾರ್ಪೋರೇಟರ್ ಒಬ್ಬರಿದ್ದಾರೆ. ಹಿಂದಿ ಪ್ರಚಾರ ಸಭಾವನ್ನು ಪ್ರಲ್ಹಾದ್ ಜೋಶಿ ಕಟ್ಟಿದ್ದಾರಾ? ಇಲ್ಲಾ ಅವರ ಹಿಂದಿನ ಕಾರ್ಪೋರೇಟರ್ ಕಟ್ಟಿದ್ದಾರಾ ಹಿಂದಿ ಪ್ರಚಾರ ಸಭಾವನ್ನು ಕಟ್ಟಿದ್ದು ನಾವು, ಅದನ್ನು ಕಿತ್ತುಕೊಂಡಿರಿ, ಇದೀಗ ಒಬ್ಬ ವೆಲ್ಡರ್’ನನ್ನು ತೆಗೆದುಕೊಂಡು ಹೋಗಿ ಅಧ್ಯಕ್ಷನಾಗಿ ಮಾಡಿದ್ದಾರೆ. ಈ ಮೂಲಕ ಗೌರವ ಘನತೆಯನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಒಬ್ಬರನ್ನು ಹಿಚುಕಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಇದು ಅಂತ್ಯವಾಗಬೇಕು. ಈ ಹಿಂದೆ ನಮ್ಮ ಮಾವ ಕಟ್ಟಿದ ಬಿಲ್ಡಿಂಗ್ ಬಿದ್ದಾಗ ಅವರನ್ನು ಆರು ತಿಂಗಳು ಜೈಲಿಗೆ ಹಾಕಿಸಿದ್ದಾರೆ. ಬಳಿಕ ಅವರು ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡರು. ಅದಕ್ಕೆ ನೇರವಾಗಿ ಜೋಶಿ ಅವರೇ ಕಾರಣ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ನಾನು ಯಾವಾಗಲೂ ಸತ್ಯದ ಪರವಾಗಿ ಹೋರಾಟ ಮಾಡಿದ್ದೇನೆ. ಅನ್ಯಾಯದ ಪರವಾಗಿ ರಾಜಕಾರಣ ಮಾಡಿಲ್ಲ, ಆದರೆ ಸದ್ಯದ ವ್ಯವಸ್ಥೆಯಲ್ಲಿ ದಿಂಗಾಲೇಶ್ವರ ಶ್ರೀಗಳ ಧ್ವನಿ ಎತ್ತಿದ್ದಾರೆ. ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕತ್ತೇನೆ. ಶ್ರೀಗಳು ಹೇಳಿರುವ ಒದೊಂದು ಮಾತಿನಲ್ಲಿ ಸತ್ಯವಿದೆ. ಅವರು ದೇವರ ರೂಪದಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಬಂದು ನಿಂತಿದ್ದಾರೆ ಎಂದು ವಿನಯ ಕುಲಕರ್ಣಿ ತಿಳಿಸಿದ್ದಾರೆ.