ಏ.2 ರಿಂದ ಎಸ್.ಎಸ್.ಕೆ ಸಮಾಜ ಚಿಂತನ ಮಂಥನ ಸಮಿತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಹುಬ್ಬಳ್ಳಿ: ಎಸ್.ಎಸ್.ಕೆ ಸಮಾಜ ಚಿಂತನ ಮಂಥನ ಸಮಿತಿಯ ವತಿಯಿಂದ ಯುಗಾದಿಯಿಂದ ಶ್ರೀರಾಮ ನವಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಚಿಂತನ ಮಂಥನ ಸಮಿತಿಯ ಮುಖ್ಯಸ್ಥ ಹನುಮಂತಸಾ ನಿರಂಜನ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ ಎರಡುವರೆ ವರ್ಷಗಳಿಂದ ಎಸ್.ಎಸ್.ಕೆ ಸಮಾಜ ಚಿಂತನ ಮಂಥನ ಸಮಿತಿ ಹಲವಾರು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅದರಂತೆ ಏ.2 ರಿಂದ ಏ.10 ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಏ.2 ರಂದು ಹರ್ ಘರ್ ಭಗವಾ – ಘರ್ ಘರ್ ಭಗವಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ 2000 ಅಧಿಕ ಧ್ವಜಗಳನ್ನು ಸಮಾಜದ ಜನರಿಗೆ ನೀಡಲಾಗಿದ್ದು, ಅದರಂತೆ ಯುಗಾದಿಯಂದು ಸಮಾಜದ ಬಾಂಧವರು ಏಕಕಾಲಕ್ಕೆ ತಮ್ಮ ಮನೆಯಲ್ಲಿಯೇ ಪೂಜೆ-ಪುನಸ್ಕಾರ ಮಾಡಲಿದ್ದಾರೆ. ಏ.3 ರಂದು ಸಂಜೆ 6:30 ಕ್ಕೆ ಕಮರಿಪೇಟೆಯ ಶ್ರೀರಾಮ ಮಂದಿರ ಆವರಣದಲ್ಲಿ ಆರ್.ಎಸ್.ಎಸ್ ದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಕೌಟುಂಬಿಕ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಏ.4 ರಿಂದ ಏ.8 ರವರೆಗೆ ಪ್ರತಿದಿನ 6:30 ರಿಂದ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜ ಗುರುಗಳಿಂದ ಶ್ರೀರಾಮ ಚಿಂತನ ಪ್ರವಚನ ಹಾಗೂ ಪ್ರಸಾದ್ ದ ವ್ಯವಸ್ಥೆ ಮಾಡಲಾಗಿದೆ ಎಂದರು.
ಏ.10 ರಂದು ಶ್ರೀರಾಮ ನವಮಿಯ ಪ್ರಯುಕ್ತ ಕಮರಿಪೇಟೆಯ ಶ್ರೀರಾಮ ಮಂದಿರದಲ್ಲಿ ಸಂಜೆ 4.00 ಕ್ಕೆ ಶ್ರೀರಾಮ ಶೋಭಾ ಯಾತ್ರೆ ದಾಜಿಬಾನ್ ಪೇಟೆಯ ಸಹಸ್ರಾರ್ಜುನ ವೃತ್ತ, ಶ್ರೀ ತುಳಜಾಭವಾನಿ ದೇವಸ್ಥಾನ ಮಾರ್ಗವಾಗಿ ದಾಜಿಬಾನ್ ಪೇಟೆ, ಕೊಪ್ಪಿಕರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀ ದುರ್ಗಾದೇವಿ ದೇವಸ್ಥಾನ ರಸ್ತೆ ಮೂಲಕ ಮೂರುಸಾವಿರಮಠದ ಶಾಲಾ ಆವರಣದಲ್ಲಿ ಮುಕ್ತಾಯಗೊಂಡು ಸಾರ್ವಜನಿಕ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂರುಸಾವಿರಮಠದ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್.ಎಸ್.ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ನಿರಂಜನ, ಗೀತಾ ಮಿತ್ರಾಣಿ, ವಿನಾಯಕ ಸೇರಿದಂತೆ ಮುಂತಾದವುಗಳ ಇದ್ದರು.