ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಕಾವು ಎಲ್ಲೆಡೆ ಹೆಚ್ಚಾಗಿದ್ದು, ಈ ನಡುವೆ ರಾಜಕೀಯ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಕೇಂದ್ರ ಸಚಿವರು ಹಾಗೂ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಸಚಿವರ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಗೃಹ ಲಕ್ಷ್ಮಿ ಹಣ ಸಹಾಯವಾಗಿದೆ. ಇದೀಗ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ್ ಜೋಶಿ, ಯಾರದಾದ್ರು ಮನೆಯಲ್ಲಿ ಆಕಸ್ಮಿಕವಾಗಿ ಮಕ್ಕಳು ಹುಟ್ಟಿದ್ರು ಸಹಿತ, ನಮ್ಮ ಎರಡು ಸಾವಿರ ರೂಪಾಯಿಯಿಂದ ಮಕ್ಕಳು ಹುಟ್ಟಿತು ಎಂಬ ಮಾನಸಿಕತೆಯಲ್ಲಿ ಕಾಂಗ್ರೆಸ್’ನವರು ಇದ್ದಾರೆ ಎಂದು ಬಾಯನ್ನು ಹರಿಬಿಟ್ಟಿದ್ದಾರೆ. ಇದೀಗ ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.