ಹುಬ್ಬಳ್ಳಿ: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಚುನಾವಣೆ ಕಾವು ಮತ್ತಷ್ಟು ರಂಗು ಪಡೆಯುತ್ತಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಪ್ರಚಾರ ಕಾರ್ಯ ಆರಂಭಿಸಿವೆ.
ಬಿಜೆಪಿ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸಲು ಗೆಲುವಿನ ತಂತ್ರ ಹೆಣೆಯುತ್ತಿದ್ದರೇ, ಇತ್ತ ಕಾಂಗ್ರೆಸ್ ಹೆಗಾದರೂ ಮಾಡಿ ಈ ಬಾರಿ ಆದರೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೈ ಬಾವುಟ ಹಾರಿಸಬೇಕೆಂಬ ಇರಾದೆಯಲ್ಲಿದೆ.
ಈ ನಡುವೆ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಜೋಶಿ ವಿರುದ್ಧ ನೇರಾನೇರ ರಾಜಕೀಯ ಯುದ್ದ ಸಾರಿದ್ದು, ಈ ಬಾರಿ ಜೋಶಿಯವರನ್ನು ಸೋಲಿಸುವುದೇ ತಮ್ಮ ಗುರಿಯನ್ನಾಗಿಸಿಕೊಂಡಿದ್ದಾರೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇದಕ್ಕಾಗಿ ದಿಂಗಾಲೇಶ್ವರ ಶ್ರೀಗಳು ಕಾಲಿಗೆ ಚಕ್ರಕಟ್ಟಿಕೊಂಡಂತೆ ನಿರಂತರವಾಗಿ ಮಠಾಧೀಪತಿಗಳ ಸಂಪರ್ಕ, ಭಕ್ತರ ಸಭೆ, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ಹೀಗೆ ಹತ್ತು ಹಲವು ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇದು ಪ್ರಲ್ಹಾದ್ ಜೋಶಿ ಅವರಿಗೆ ನುಂಗಲಾರದ ತುತ್ತಾಗಿದ್ದು, ಇದರಿಂದಾಗಿ ಹೇಗೆ ಶ್ರೀಗಳ ಮನಸ್ಸು ವೊಲಿಸುವುದು ಎಂಬ ಚಿಂತೆಯ ನಡುವೆಯೇ ದಿನನಿತ್ಯ ಒಂದಿಲ್ಲೊಂದು ಸಮಾಜದ ಮುಖಂಡರ ಸಭೆ ನಡೆಸುತ್ತಿದ್ದಾರೆ.
ಇದೀಗ ಮತ್ತೊಂದು ಸ್ಪೋಟಕ ಸುದ್ದಿಯ ಸದ್ದು ಎಲ್ಲೆಡೆ ಹರಡುತ್ತಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ರಾಜಕೀಯ ಪಕ್ಷದ ನಾಯಕರು, ಸೇರಿದಂತೆ ರಾಜಕೀಯ ಕಟ್ಟೆಯಲ್ಲಿನ ಜನರ ಬಾಯಿಂದ ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಸ್ವತಃ ದಿಂಗಾಲೇಶ್ವರ ಶ್ರೀಗಳೇ ಸ್ಪಷ್ಟಪಡಿಸಬೇಕು.
ವಿನೋದ ಅಸೂಟಿಗೆ ಈಗಾಗಲೇ ಕಾಂಗ್ರೆಸ್ ‘ಬಿ’ ಫಾರಂ ನೀಡಿದ್ದು, ನಾಮಪತ್ರ ಸಲ್ಲಿಕೆಗೆ ಅಸೂಟಿ ಸಿದ್ದತೆ ನಡೆಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಈ ಎಲ್ಲ ಗೊಂದಲಕ್ಕೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಬೇಕಾಗಿದೆ.