
ಹುಬ್ಬಳ್ಳಿ: ಹು-ಧಾ ಕಮಿಷನರ್ ಹುದ್ದೆಗೆ ನೇಮಕ ಗುರುವಾರ ರಾತ್ರಿ ಸರಕಾರ ಹೊರಡಿಸಿದ ಆದೇಶ ಹಿಡಿದುಕೊಂಡು ಶುಕ್ರವಾರ ಅಧಿಕಾರ ಸ್ವೀಕರಿಸಲು ಧಾರವಾಡದ ಮನೆಯಿಂದ ಹುಬ್ಬಳ್ಳಿ ಪಾಲಿಕೆ ಕಚೇರಿಗೆ ಬರುತ್ತಿದ್ದ ಮಂಜುನಾಥ ಡೊಂಬರ್, ದಾರಿ ಮಧ್ಯೆ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಸರ್ಕಲ್ನಲ್ಲಿಯೇ ಕಾರು ಟರ್ನ್ ಮಾಡಿಕೊಂಡು ಅತೃಪ್ತಿಯೊಂದಿಗೆ ಹೊರಟು ಹೋದರು.
ಪಾಲಿಕೆಯಿಂದ ಬುಧವಾರ ವರ್ಗಾವಣೆಗೊಂಡಿದ್ದ ಡಾ. ರುದ್ರೆಶ ಘಾಳಿ, 12 ಗಂಟೆ ವೇಳೆಗೆ ಮೊಬೈಲ್ಗೆ ಕರೆ ಮಾಡಿ ಸಾರಿ ಡೊಂಬರ್, ಪಾಲಿಕೆ ಕಮಿಷನರ್ ಆಗಿ ನಾನೇ ಮುಂದುವರಿಯುತ್ತೇನೆ ಎಂದು ಹೇಳಿ ಕಾಲ್ ಕಡಿತಗೊಳಿಸಿ, ಮೀಟಿಂಗ್ಗೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಕಡೆಗೆ ತೆರಳಿದರು.
ರುದ್ರೇಶ ವರ್ಗಾವಣೆಯಿಂದ ತೆರವಾಗಿದ್ದ ಪಾಲಿಕೆ ಕಮಿಷನರ್ ಹುದ್ದೆಗೆ ಮಂಜುನಾಥ ಡೊಂಬರ್ ಅವರನ್ನು ನಿಯೋಜಿಸಿ ಸರಕಾರ ಗುರುವಾರ ರಾತ್ರಿ ಆದೇಶ ಹೊರಡಿಸಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸುವ ಮುನ್ನ ಸರಕಾರ ಡೊಂಬರ್ ಆದೇಶವನ್ನು ರದ್ದುಪಡಿಸಿತು. ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್)ಯ ಈ ಧೋರಣೆ ಬಗ್ಗೆ ಅವಳಿ ನಗರದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಪಾಲಿಕೆ ಕಮಿಷನರ್ ಹುದ್ದೆಗೆ ಬಂದಿದ್ದ ರುದ್ರೇಶ ಘಾಳಿ, ಜೂ.18ರಂದು ದಿಢೀರ್ ವರ್ಗಾವಣೆ ಪಡೆದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತರ ಸ್ಥಾನಕ್ಕೆ ನಿಯೋಜನೆಗೊಂಡಿದ್ದರು. ಜೂನ್ 25ಕ್ಕೆ ಅಧಿಕಾರ ಸ್ವೀಕರಿಸಿ ಸರಿಯಾಗಿ ಆರು ತಿಂಗಳಾಗುತಿತ್ತು. ಕಾಂಗ್ರೆಸ್-ಬಿಜೆಪಿ ನಡುವಣ ತಿಕ್ಕಾಟಕ್ಕೆ ಕಮಿಷನರ್ ಹೈರಾಣಾಗಿ ಸಾಕಪ್ಪ ಸಾಕು ಎಂದುಕೊಂಡು ಹೊರಟರು ಎಂದು ಅವಳಿ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವರ್ಗಾವಣೆ ಆದೇಶ ಬೆನ್ನಲ್ಲೇ ಹಿತೈಷಿಗಳು ಪಾಲಿಕೆಗೆ ದೌಡಾಯಿಸಿ ಮುಂದುವರಿಯುವಂತೆ ಸಲಹೆ ಮಾಡಿದ್ದರು. ಇನ್ನು ಕೆಲವರು ಪೋನ್ ಮಾಡಿ, ಯಾಕ್ರೀ ಇಷ್ಟೊಂದು ದಿಢೀರ್ ಡಿಸಿಜನ್ ಮಾಡಿದರಿ ಎಂದು ಕೇಳುತ್ತಿದ್ದರು. ಹು-ಧಾ ಪ್ರತಿಷ್ಠಿತ ಪಾಲಿಕೆಗೆ ಕಮಿಷನರ್ ಹುದ್ದೆಯನ್ನು ಸಲೀಸಾಗಿ ಬಿಟ್ಟು ಹೊರಡುವುದು ಸರಿಯಲ್ಲ. ಕನಿಷ್ಠ ಒಂದು ವರ್ಷವಾದರೂ ಮುಂದುವರಿಯಿರಿ ಎಂದು ಹಿತೈಷಿಗಳು ಸಲಹೆ ನೀಡುತ್ತಿದ್ದರು. ಇದರಿಂದ ಶುಕ್ರವಾರ ಬೆಳಗಿನ ಹೊತ್ತಿಗೆ ಮನಸು ಬದಲಿಸಿಕೊಂಡ ರುದ್ರೇಶ್, ವರ್ಗಾವಣೆ ಆದೇಶದೊಂದಿಗೆ ಹುಬ್ಬಳ್ಳಿಗೆ ಬರುತ್ತಿದ್ದ ಮಂಜುನಾಥ ಡೊಂಬರ್ಗೆ ನಿರಂತರ ಕಾಲ್ ಮಾಡಿ ಅವರ ಚಲನವಲನಗಳನ್ನು ತಿಳಿದುಕೊಂಡು, ಡಿಪಿಎಆರ್ ಡಿಎಸ್ (ಉಪಕಾರ್ಯದರ್ಶಿ)ಅವರೊಂದಿಗೆ ಮಾತನಾಡುವಂತೆ ತಿಳಿಸಿದರು.
ಇಷ್ಟೊಂದು ಯಾಕೆ ಅವಸರ ಮಾಡುತ್ತಿದ್ದರೆಂದು ಗಲಿಬಿಲಿಗೊಂಡ ಮಂಜುನಾಥ, ಭೈರಿದೇವರಕೊಪ್ಪ ಬಳಿ ಕೆಲ ಕ್ಷಣ ನಿಂತುಕೊಂಡರು. ಡಿಎಸ್ ಅವರಿಗೆ ಕರೆ ಮಾಡಿದರು. ಆಗ, ಸಾರಿ ವೇಟ್ ಮಾಡಿ ಎಂದು ಡಿಎಸ್ ಹೇಳಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಪೋನ್ ಮಾಡಿದ ರುದ್ರೇಶ್, ಸಾರಿ ಮಂಜುನಾಥ್, ನಾನು ಮತ್ತೆ ಎಚ್ಡಿಎಂಸಿಯಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದರು.
ಹುರುಪಿನಲ್ಲಿದ್ದ ಮಂಜುನಾಥ, ಬಂದ ದಾರಿಗೆ ಸುಂಕ ಇಲ್ಲ ಎಂದುಕೊಂಡು ಬಿವಿಬಿ ಕಾಲೇಜ್ ಕ್ರಾಸ್ನಲ್ಲಿ ಕಾರು ಟರ್ನ್ ಮಾಡಿಕೊಂಡು ಧಾರವಾಡದ ಮನೆಗೆ ತೆರಳಿದರು. ಇತ್ತ ರುದ್ರೇಶ್ ಮೀಟಿಂಗ್ ಎಂದುಕೊಂಡು ಧಾರವಾಡ ಡಿಸಿ ಕಚೇರಿಯತ್ತ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಹೋದರು.
ರುದ್ರೇಶ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಯಾರು ಎಂದು ಗುರುವಾರ ಚರ್ಚೆ ನಡೆದಿತ್ತು. ರಾತ್ರಿ ಹೊತ್ತಿಗೆ ಆದೇಶ ಹೊರಬೀಳುತ್ತಿದ್ದಂತೆ ಮಂಜುನಾಥ ಡೊಂಬರ್ ಯಾರು, ಎಲ್ಲಿಯವರು ಎಂದು ಅವರ ಹಿನ್ನೆಲೆ-ಮುನ್ನಲೆ ತಿಳಿಯಲೆತ್ನಿಸುತ್ತಿದ್ದರು ಜನರು. ಏತನ್ಮಧ್ಯೆ ರುದ್ರೇಶ್, ಗುರುವಾರ ರಾತ್ರಿಯೇ ಮಂಜುನಾಥ್ ಕರೆ ಮಾಡಿ ಯಾವ ದಿನ ಚಾರ್ಜ್ ತಗೊಳ್ತೀರಿ ಎಂದು ಕೇಳಿದ್ದರು.
ಮೊದಲು ಶನಿವಾರ ಎಂದಿದ್ದ ಮಂಜುನಾಥ, ದಿಢೀರ್ ಆಗ ಬೆಂಗಳೂರಿನಿಂದ ವಿಮಾನ ಮೂಲಕ ಶುಕ್ರವಾರ ಬೆಳ್ಳಂ ಬೆಳಗ್ಗೆ ಬಂದಿದ್ದರು. ಇದೇ ದಿನವೇ ಚಾರ್ಜ್ ತೊಗೊಳ್ತೀನ್ರೀ ಎಂದು ರುದ್ರೇಶ್ಗೆ ಮಂಜುನಾಥ್ ತಿಳಿಸಿದರು. ಅಷ್ಟೇ ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳಿಗೂ ತಿಳಿಸಿದ್ದರು ಎನ್ನಲಾಗಿದೆ.
ತದನಂತರದಲ್ಲಿ ನಡೆದ ಆಟವೇ ಬೇರೆಯೇ ಆಗಿತ್ತು. ರುದ್ರೇಶ್ ಮರು ನೇಮಕದ ಬಗ್ಗೆ ಶುಕ್ರವಾರ ತಡರಾತ್ರಿಯವರೆಗೂ ಆದೇಶ ಬಂದಿರಲಿಲ್ಲ.
ಹು-ಧಾ ಕಮಿಷನರ್ ಹುದ್ದೆ ಜನತೆ ಹುಡಾ ಆಯಕ್ತರ ಹುದ್ದೆಗೆ ದೇವರಾಜ್ ಎಂಬುವರನ್ನೂ ಸರಕಾರ ನೇಮಕ ಮಾಡಿತ್ತು. ಆದೇಶದಂತೆ ದೇವರಾಜ್ ಭೂ ಸ್ವಾಧೀನಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಂಡು ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದರು. ಆದರೆ, ದಿಢೀರ್ ಆದೇಶ ರದ್ದಿನಿಂದ ಅವರು ಸಹ ಹುದ್ದೆಯಿಂದ ವಂಚಿತರಾಗಿದ್ದುಘಿ, ಯಾವುದೇ ಸ್ಥಳವಿಲ್ಲದೇ ಅತಂತ್ರರಾಗಿದ್ದಾರೆ ಎಂದು ತಿಳಿದು ಬಂದಿದೆ.




