ಹುಬ್ಬಳ್ಳಿ: ಇಲ್ಲಿನ ತಾರಿಹಾಳ ಲೋಟಸ್ ಬಾರ್ ಹತ್ತಿರ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಷಣ್ಮುಖಪ್ಪ ಹಡಪದ ಸಾವಿನ ಪ್ರಕರಣವನ್ನು ಕೇವಲ 24 ಗಂಟೆಯಲ್ಲಿ ಬೇಧಸಿರುವ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ.7 ರಿಂದ ಏ.8 ರ ನಡುವಿನ ಸಮಯದಲ್ಲಿ ತಾರಿಹಾಳ ಲೋಟಸ್ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ದುಷ್ಕರ್ಮಿಗಳು ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಹಾಲಿವಸ್ತಿ ತಾರಿಹಾಳದ ವಾಜಪೇಯಿನಗರದ ನಿವಾಸಿ ಷಣ್ಮುಖಪ್ಪ ಹಡಪದ (55) ಎಂಬಾತನನ್ನು ಬೀಯರ ಬಾಟಲಿಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಅದರಂತೆ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಚಿನ ಆಲಮೇಲಕರ, ಪಿಎಸ್ಐ ಅಭಿಜಿತ, ಎನ್.ಎಮ್ ಹೊನ್ನಪ್ಪನವರ, ನಾರಾಯಣ ಹಿರೇಹೊಳಿ, ಎ.ಎಸ್.ಐ ಎ.ಎ.ಕಾಕರ, ಚನ್ನಪ್ಪ ಬಳ್ಳೊಳ್ಳಿ, ಸಿ.ಬಿ.ಜನಗಣ್ಣವರ, ನಾಗಪ್ಪ ಸಂಶಿ, ವಾಯ್.ಡಿ.ಕುಂಬಾರ, ನಾಗರಾಜ ಮಾಣಿಕ, ಪ್ರೇಮನಾಥ, ಆರೀಫ್ ಗೋಲಂದಾಜ, ವಿಠ್ಠಲ ಒಳಗೊಂಡ ತಂಡ ಕೇವಲ 24 ಗಂಟೆಯಲ್ಲಿ ಪ್ರಕರಣವನ್ನು ಬೇಧಿಸಿದ್ದು, ಸರಾಯಿ ಕುಡಿಯುವ ವಿಷಯಕ್ಕೆ ಜಗಳ ನಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗಟ್ಟಿಯ ಪ್ರವೀಣ ಕುಬಿಹಾಳ (25), ಹನಮಂತ ಮಾಳಗಿಮನಿ (25), ಸಹದೇವ ನೂಲ್ವಿ (24) ಎಂಬಾತರನ್ನು ಬಂಧಿಸಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣವನ್ನು ಬೆಳಕಿಗೆ ತಂದ ವಿಶೇಷ ತನಿಖಾ ತಂಡಕ್ಕೆ ಹಿರಿಯ ಅಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.