ಹುಬ್ಬಳ್ಳಿ: ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಎರಡು ಕಾಲುಗಳನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ನರಳುತ್ತಿದ್ದ ಘಟನೆ ಇಲ್ಲಿನ ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ಗುರುವಾರ ನಡೆದಿದೆ.
ಶಾಲಿಮಾರ್- ವಾಸ್ಕೋಡಿಗಾಮಾ ರೈಲಿಗೆ ವ್ಯಕ್ತ ಸಿಲುಕಿದ್ದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟ ನಾಲ್ಕೈದು ನಿಮಿಷದಲ್ಲಿ ಈ ಘಟನೆ ನಡೆದಿದೆ. ರೈಲು ಚಲಿಸುತ್ತಿದ್ದ ಹಳಿ ಮೇಲೆಯೇ ವ್ಯಕ್ತಿ ನಿಂತಿರುವುದನ್ನು ಲೋಕೋ ಪೈಲೆಟ್ ಗಮನಿಸಿ ಹಾರ್ನ್ ಮಾಡಿದ್ದಾರೆ. ಆದರೆ ಸರಿಯದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ ಪರಿಣಾಮ ವ್ಯಕ್ತಿ ಜೀವಂತ ಉಳಿದಿದ್ದಾನೆ. ಎಂಜಿನ್ ಹಾಗೂ ಮೂರ್ನಾಲ್ಕು ಬೋಗಿಗಳು ಕಾಲ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿದೆ. ಇನ್ನೊಂದು ಕಾಲು ಅರ್ಧ ತುಂಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಆತ್ಮಹತ್ಯೆ ಶಂಕೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಪರಿಶೀಲಿಸಿದಾಗ ಕೈ ಮೇಲೆ ನನ್ನ ಹೆಂಡತಿ ನಂಬರ್ ಎಂದು ಬರೆದುಕೊಂಡಿರುವುದನ್ನು ಗಮನಿಸಿ ಕರೆ ಮಾಡಿದಾಗ ಹೆಗ್ಗೇರಿ ನಿವಾಸಿ ಎಂಬುವುದು ಗೊತ್ತಾಗಿದೆ. ಹೀಗಾಗಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಯುವಕರು: ಘಟನೆ ತಿಳಿಯುತ್ತಿದ್ದಂತೆ ಕಿಮ್ಸ್ ಪ್ರವೇಶ ದ್ವಾರದಲ್ಲಿ ಯುವಕರು ಆಗಮಿಸಿ ರೈಲ್ವೆ ಹಳಿಯಡಿ ಸಿಲುಕಿದ ವ್ಯಕ್ತಿಯನ್ನು ಹೊರ ತೆಗೆದು ತುಂಡಾಗಿ ಬಿದ್ದಿದ್ದ ಎರಡು ಕಾಲುಗಳ ಸಮೇತ ಆಸ್ಪತ್ರೆಗೆ ಸಾಗಿಸಿದರು.