
ಶಿಗ್ಗಾಂವಿ: ತಾಲೂಕಿನ ವಿ.ಐ.ಎನ್.ಪಿ. ಡಿಸ್ಟಿಲರೀಸ್ ಅಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ (ಕೋಣನಕೇರಿ) ಕಾರ್ಖಾನೆಗೆ ರೈತರು ಸರಬರಾಜು ಮಾಡಿದ ಕಬ್ಬಿನ ಹಣ ಮೂರು ತಿಂಗಳಾದರೂ ಬ್ಯಾಂಕ್ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಹಾವೇರಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಕಾರ್ಖಾನೆ ಸಿಬ್ಬಂದಿಯನ್ನು ಭೇಟಿ ಮಾಡಿ, “ಕಾರ್ಖಾನೆಗೆ ಸಾಗಿದ ನಮ್ಮ ಕಬ್ಬಿನ ಬಿಲ್ಲುಗಳನ್ನು ಏಕೆ ಬಾಕಿ ಇಟ್ಟಿದ್ದೀರಿ? ಎಷ್ಟು ಟನ್ ಕಬ್ಬಿಗೆ ಬಿಲ್ ಮಾಡಿದ್ದೀರಿ? ಇನ್ನೂ ಎಷ್ಟು ಟನ್ ಬಾಕಿಯಿದೆ? ಹಾವೇರಿ ಜಿಲ್ಲೆಯ ರೈತರ ಬಿಲ್ ಬಾಕಿ ಇಡಲು ಕಾರಣವೇನು?” ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹಾಗೂ ಬಸಲಿಂಗಪ್ಪ ನರಗುಂದ ಅವರು ಕಾರ್ಖಾನೆ ಸಿಬ್ಬಂದಿಯಿಂದ ಸ್ಪಷ್ಟನೆ ಕೇಳಿದರು. ರೈತರ ಸಮಸ್ಯೆಯನ್ನು ಆಲಿಸಿದ ಕಾರ್ಖಾನೆ ಸಿಬ್ಬಂದಿ ಲಕ್ಷ್ಮಣ ಅವರು ಫೆಬ್ರವರಿ 28ರೊಳಗಾಗಿ ಎಲ್ಲ ಬಾಕಿ ಬಿಲ್ಲುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಫೆಬ್ರವರಿ 25ರೊಳಗಾಗಿ ರೈತರ ಸಮ್ಮುಖದಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಸಿಜಿಎಂ ಅವರೊಂದಿಗೆ ಈ ತಿಂಗಳ 20 ಅಥವಾ 21ರಂದು ಪ್ರೆಸ್ ಮೀಟ್ ನಡೆಸಬೇಕು ಎಂದು ಆಗ್ರಹಿಸಿದರು. ಜೊತೆಗೆ, ರೈತರಿಗೆ 550 ರೂ.ಗೆ ಮಾರಾಟ ಮಾಡುತ್ತಿರುವ ಗೊಬ್ಬರವನ್ನು ಒಂದು ಟನ್‌ಗೆ 400 ರೂ.ಗೆ ನೀಡಬೇಕು ಎಂದು ಒತ್ತಾಯಿಸಿದರು.
ಫೆಬ್ರವರಿ 28ರೊಳಗೆ ಕಬ್ಬಿನ ಹಣ ಜಮಾ ಆಗದಿದ್ದರೆ ಮಾರ್ಚ್ ತಿಂಗಳಲ್ಲಿ ಹೋರಾಟ ತೀವ್ರಗೊಳಿಸಿ ಹಣ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಬರಲಿಂಗಪ್ಪ ನರಗುಂದ, ಪ್ರಮುಖರಾದ ಬಾಹುಬಲಿ ಸೊಗಲೀ, ಈರಣ್ಣ ಸಂಗೊಂಡಯ್ಯ, ಮುತ್ತಣ್ಣ ವೀರಾಪುರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ವರದಿ: ಸೋಮಶೇಖರ ಲಮಾಣಿ




