ಹಾಸನ: ಬಡ ಜನರ ವಾಸಕ್ಕೆ ಅನುಕೂಲಕ್ಕೆ ಹಂಚಿಕೆ ಮಾಡಲಾದ ಭೂಮಿಯನ್ನು ಸ್ಥಳೀಯ ಆಡಳಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡದೇ ಅಲೆದಾಡಿಸುತ್ತಿರುವ ಆರೋಪ ಹಾಸನ ಜಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಕೇಳಿಬಂದಿದೆ.
ಇಲ್ಲಿನ ವಸತಿ ರಹಿತ ಬಡಜನರಿಗೆ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ವಸತಿ ನಿರ್ಮಾಣಕ್ಕೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಆದರೆ ಫಲಾನುಭವಿಗಳಿಗೆ ಮಾತ್ರ ಈವರೆಗೆ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಹಕ್ಕುಪತ್ರ ವಿತರಣೆ ಮಾಡದೇ, ತಡೆಹಿಡಿದು ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ರಿ) ರೈತ ಬಣದ ರಾಜ್ಯಾಧ್ಯಕ್ಷ ಚಂದ್ರಶೇಖರ ಭೋವಿ ಅವರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಭೂಮಿ ಹಂಚಿಕೆಯ ಹಕ್ಕುಪತ್ರ ವಿತರಿಸುವಂತೆ ಪ್ರತಿಭಟನೆ ಮಾಡಿದರು. ಅಷ್ಟೇ ಅಲ್ಲದೇ ಈ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿದೆ.
ಶೀಘ್ರವಾಗಿ ರಾಮನಾಥಪುರದ ಜನರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಒಂದು ವೇಳೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದರೇ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.