ಕೆ.ಬಿ.ನಗರ–ಮಂಟೂರ್ ರೋಡ್ನಿಂದ ರಿಂಗ್ರೋಡ್ಗೆ ಮಾರ್ಗ ಈಗ ಬೆಳಕಿನ ಚೈತನ್ಯ ಕಂಡಿದೆ, ಆದರೆ ಮುಂದಿನ ನಿರ್ವಹಣೆ ಪ್ರಶ್ನಾರ್ಥಕ!
ಹುಬ್ಬಳ್ಳಿ. ನಗರದ ಕೆ.ಬಿ.ನಗರ ಮಂಟೂರ್ ರೋಡ್ನಿಂದ ರಿಂಗ್ರೋಡ್ಗೆ ಹೋಗುವ ಈ ಪ್ರಮುಖ ಮಾರ್ಗವು ಹಲವು ವರ್ಷಗಳಿಂದ ಕತ್ತಲೆಯ ಬಾಧೆಯಲ್ಲಿ ಮುಳುಗಿತ್ತು. ರಸ್ತೆ ಬದಿಗಳಲ್ಲಿ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಈ ಮಾರ್ಗವು ಅಪರಾಧಿಗಳ ಅಟ್ಟಹಾಸಕ್ಕೆ ಗುರಿಯಾಗಿತ್ತು. ದರೋಡೆ, ಕಳ್ಳತನ, ಗುಂಪುಗಳಾಟ, ಮತ್ತು ವಾಹನ ಅಪಘಾತಗಳು ನಿತ್ಯದ ವಿಚಾರವಾಗಿದ್ದವು. ಅನೇಕ ಅಮಾಯಕರು ಈ ರಸ್ತೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಸ್ಥಳೀಯರ ನೋವುಭರಿತ ಅಸಮಾಧಾನ.
ಮೂರು–ನಾಲ್ಕು ತಿಂಗಳ ಹಿಂದೆ ಹೊಸ ಮೀನು ಮಾರ್ಕೆಟ್ ಹತ್ತಿರ ನಡೆದ ಭೀಕರ ಅಪಘಾತವು ಈ ರಸ್ತೆಯ ಅಸುರಕ್ಷತೆಯನ್ನು ಮತ್ತೆ ನೆನಪಿಗೆ ತಂದಿತ್ತು. ಒಂದು ಇನೋವಾ ಕಾರು ಬೈಕ್ಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಸ್ಥಳೀಯರಲ್ಲಿ ಭಯವನ್ನು ಮೂಡಿಸಿತ್ತು ಮತ್ತು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿತ್ತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸ್ಥಳೀಯ ಶಾಸಕ ಅಬ್ಬಯ್ಯ ಅವರ ಕೃಪಾಕಟಾಕ್ಷ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಬದ್ಧ ಕಾರ್ಯಾಚರಣೆ ಫಲವಾಗಿ ಈ ರಸ್ತೆ ಹೊಸ ರೂಪ ಪಡೆದಿದೆ. ಬೀದಿ ದೀಪಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕತ್ತಲೆಯ ಆವರಣದಲ್ಲಿದ್ದ ಈ ರಸ್ತೆ ಈಗ ಬೆಳಕಿನ ಹೊಳಪಿನಲ್ಲಿ ಮಿಂಚುತ್ತಿದೆ.
ಸ್ಥಳೀಯ ನಾಗರಿಕರು ಸಂತೋಷ ವ್ಯಕ್ತಪಡಿಸುತ್ತಾ, “ಈ ರಸ್ತೆಯಲ್ಲಿ ನಾವು ವರ್ಷಗಳ ಕಾಲ ಭಯದಲ್ಲೇ ಸಂಚರಿಸುತ್ತಿದ್ದೆವು. ಈಗ ಬೆಳಕು ಬಂತು, ಸುರಕ್ಷತೆ ಅನ್ನಿಸುತ್ತಿದೆ. ಇದು ನಿಜವಾದ ಅಭಿವೃದ್ಧಿಯ ಬೆಳಕು,” ಎಂದು ಪ್ರತಿಕ್ರಿಯಿಸಿದ್ದಾರೆ.ಸ್ಥಳೀಯ ನಾಗರಿಕರೊಬ್ಬರು ಖುಷಿ ವ್ಯಕ್ತಪಡಿಸುತ್ತಾ ಹೇಳಿದರು
“ಇಷ್ಟು ವರ್ಷಗಳಿಂದ ಕತ್ತಲೆಯಲ್ಲೇ ಸಂಚರಿಸುತ್ತಿದ್ದೆವು, ಅಪಘಾತಗಳ ಭಯದಿಂದ ಮಕ್ಕಳು ಶಾಲೆಗೆ ಹೋಗುವುದೂ ಕಷ್ಟವಾಗಿತ್ತು. ಈಗ ಬೆಳಕು ಬಂತು, ಅದು ನಿಜವಾದ ಆಶಾಕಿರಣ!”
ಆದರೆ ಕೆಲವರು ಎಚ್ಚರಿಕೆ ಶಬ್ದ ಎತ್ತಿದ್ದಾರೆ
“ಇಂತಹ ಕೆಲಸಗಳು ಕೆಲವೊಮ್ಮೆ ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗುತ್ತವೆ. ದೀಪಗಳು ಇವತ್ತು ಬೆಳಗುತ್ತಿವೆ, ಆದರೆ ಇನ್ನೂ ಕೆಲವು ತಿಂಗಳಲ್ಲಿ ನಿಷ್ಕ್ರಿಯವಾದರೆ ಮತ್ತೆ ಹಳೆಯ ಪರಿಸ್ಥಿತಿ ಬರಬಾರದು.”
ಮುಂದಿನ ಪ್ರಶ್ನೆ: ಬೆಳಕು ಎಷ್ಟು ದಿನ?
ಈ ಬೆಳಕು ಶಾಶ್ವತವಾಗಿರಬೇಕಾದರೆ ನಿರಂತರ ನಿರ್ವಹಣೆ ಅತ್ಯಾವಶ್ಯಕ. ಪಾಲಿಕೆಯು ದೀಪಗಳ ನಿರ್ವಹಣೆಗೆ ಪ್ರತ್ಯೇಕ ಯಂತ್ರಣೆಯನ್ನು ರೂಪಿಸಬೇಕೆಂಬ ಬೇಡಿಕೆ ಜನರಿಂದ ಕೇಳಿಬರುತ್ತಿದೆ. ದೀಪಗಳು ಕಾರ್ಯನಿರ್ವಹಿಸುತ್ತಲೇ ಇರಬೇಕು, ರಸ್ತೆಯ ಸುರಕ್ಷತೆ ಮುಂದುವರಿಯಬೇಕು ಎಂಬುದು ಸ್ಥಳೀಯರ ಹಂಬಲ.
ವರದಿ ಶಶಿಕಾಂತ್ ಕೊರವರ



