ಶಿರಸಿ : ಬಡವರ ಬಾಳಿಗೆ ಬೆಳಕಾಗಿರುವ, ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿಯನ್ನು ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಿರಸಿ ತಾಲೂಕ ಪಂಚಾಯಿತಿಯ ತಾಂತ್ರಿಕ ಸಂಯೋಜಕ ಪ್ರವೀಣ ಎಂ. ಸಲಹೆ ನೀಡಿದರು.
ಶಿರಸಿಯ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ನರೇಗಾ ರೋಜಗಾರ್ ದಿನ ಆಚರಿಸಿ, ಮಾತನಾಡಿದ ಅವರು, ಜನ ಹಿತಕ್ಕಾಗಿ ರೂಪಿಸಿರುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನ ಗ್ರಾಮೀಣ ಭಾಗದ ಜನರಿಗೆ ತಲುಪಿಸಲು ರೋಜಗಾರ ದಿನ ಆಚರಿಸಲಾಗುತ್ತಿದೆ ಎಂದರು.
ಇದಕ್ಕೂ ಮುಂಚೆ ಭೈರುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರ ಪರಿಹಾರಕ್ಕೆ ಪೂರಕವಾಗಿ ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳು ಹಾಗೂ ಸಹಾಯಧನದ ಕುರಿತು ಮಾಹಿತಿ ಒದಗಿಸಿ, ಕಾಮಗಾರಿಗಳಿಗೆ ಹೊಸ ಕ್ರೀಯಾಯೋಜನೆ ಸಲ್ಲಿಸಲು ತಿಳಿಸಲಾಯಿತು.
ನಂತರ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಿಗೆ ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳು, ಕೆಲಸ, ವೇತನ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಜನರಿಗೆ ಹೊಸ ನರೇಗಾ ಜಾಬ್ ಕಾಡ್೯ಗಳನ್ನು ಮಾಡಿಸಿಕೊಳ್ಳುವಂತೆ ಹಾಗೂ ಹಳೆ ಜಾಬ್ ಕಾಡ್೯ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಯಿತು.
ರೋಜಗಾರ ದಿನಾಚರಣೆಯಲ್ಲಿ ಶಿರಸಿ ತಾಲೂಕ ಪಂಚಾಯಿತಿಯ ತಾಂತ್ರಿಕ ಸಹಾಯಕರಾದ ಸುಪ್ರೀತ್ ನಾಯ್ಕ, ವಿನೋದ ಪಟಗಾರ, ಶುಭಾ ಹೆಗಡೆ ಹಾಗೂ ಭೈರುಂಬೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.