ಕುರಿಗಾರಿ ಮಹಿಳೆಯ ರೇಪ್ ಆ್ಯಂಡ್ ಮರ್ಡರ್ : ಹುಬ್ಬಳ್ಳಿಯಲ್ಲಿ ಕುರುಬರ ಕಿಚ್ಚು
ಹುಬ್ಬಳ್ಳಿ : ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಯಿ ಮಹಿಳೆಯ ಮೇಲೆ ಅತ್ಯಾಚಾರಗೈದ ಆರೋಪದ ಮೇಲೆ ಗಲ್ಲು ಶಿಕ್ಷೆ ನೀಡಬೇಕೆಂದು ಕೋರಿ ಶ್ರೀಕನಕ ಸೇವಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕುರುಬರ ಕಿಚ್ಚು
ನಗರದ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರರ ಕಚೇರಿಯವರೆಗೆ ಬೃಹತ್ ರ್ಯಾಲಿ ನಡೆಸಿದ ಅವರು, ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆದು ತಮ್ಮ ಆಕ್ರೋಶ ಹೊರಹಾಕಿದರು. ನಂತರ ತಹಶಿಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಕುರುಬ ಸಮಾಜದ ಮುಖಂಡ ಬಸವರಾಜ ಮಲಕಾರಿ ಮಾತನಾಡಿ, ವಿವಿಧ ಸಂಘಟನೆ, ಸಂಘ-ಸಂಸ್ಥೆಗಳು ಎಲ್ಲರೂ ಪಕ್ಷಾತೀತವಾಗಿ ಕುರಿಗಾಯಿ ಮಹಿಳೆ ಲಕ್ಷ್ಮೀ ಕಳ್ಳಿಮನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡನೀಯವಾಗಿದ್ದು , ಆರೋಪಗಳಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು. ಅಲ್ಲದೇ ತೆಲಂಗಾಣದಲ್ಲಿ ಅತ್ಯಾಚಾರಗೈದ ಆರೋಪಿಗೆ ಎನ್ ಕೌಂಟರ್ ಮಾಡಿ ಶಿಕ್ಷೆ ವಿಧಿಸಬೇಕು. ಕೊಲೆಯಾದ ಕುರಿಗಾಯಿ ಮಹಿಳೆಗೆ 50 ಲಕ್ಷ ಪರಿಹಾರ, ಆಕೆಯ ಮೂರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಸರ್ಕಾರ ನೋಡಿಕೊಳ್ಳಬೇಕು ಹಾಗೂ ಕುರಿಗಾರರಿಗೆ ಗನ್ ಲೈಸನ್ಸ್ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಕುರಿಗಾಯಿಗಳ ಮೇಲಿನ ದೌರ್ಜನ್ಯ, ಶೋಷಣೆ, ಕೊಲೆ,ಅತ್ಯಚಾರ ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು. ಇಂದು ರಾಜ್ಯದ ಎಲ್ಲ ತಾಲೂಕಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕಿದೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮನಸೂರು ಶ್ರೀಗಳು, ಸಿದ್ದಣ್ಣ ತೇಜಿ, ವಿವಿಧ ಕುರುಬ ಸಂಘಟನೆಗಳು ಸೇರಿದಂತೆ ನೂರಾರು ಕುರಿಗಾರರು ಪಾಲ್ಗೊಂಡಿದ್ದರು.