ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಮಾಹಿತಿ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದಿನವಾಣಿಗೆ ತಿಳಿಸಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದು ಯಾವಾಗ? ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ದಿನವಾಣಿ ಸುದ್ದಿ ಪ್ರಕಟಿಸಿತ್ತು. ಸುದ್ದಿ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ.
ಕುಸುಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕವಿತಾ ಅಂಗಡಿ ಎಂಬಾತರು ಸರ್ವೇ ನಂಬರ್ 760/1/1ಬ/2 ರಲ್ಲಿ ತಮ್ಮ 1 ಎಕರೆ 20 ಗುಂಟೆ ಜಾಗವನ್ನು ವಾಣಿಜ್ಯಕ್ಕಾಗಿ ಭೂಮಿಯನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ.
ಈ ವೇಳೆ ಪಕ್ಕದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿ, ಅಕ್ಕಪಕ್ಕದ ರೈತರಿಗೆ ತೊಂದರೆ ಉಂಟು ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಪಿಡಿಓ ಶಶಿಕಾಂತರೆಡ್ಡಿ ಮಂಟೂರ ಅವರಿಗೆ ಮನವಿ ಸಲ್ಲಿಸಿ, ಕ್ರಮಕೈಗೊಳ್ಳಲು ತಿಳಿಸಿದ್ದಾರೆ. ಆದರೆ ಪಿಡಿಓ ಸಾಹೇಬರು ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇದೀಗ ಈ ಘಟನಾ ಮಾಹಿತಿ ತಹಶಿಲ್ದಾರ ಅವರು ಪಡೆದುಕೊಂಡಿದ್ದು, ಪಕ್ಷ ಅಧಿಕಾರಿ ಎನಿಸಿರುವ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಯಾವ ಕ್ರಮ ಕೈಗೊಳ್ಳತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಒತ್ತುವರಿ ತೆರವಾಗುವವರೆ ಸುದ್ದಿ ನಿರಂತರ…