ಹುಬ್ಬಳ್ಳಿ: ಸ್ವಲ್ಪ ಖಾಲಿ ಜಾಗಸಿಕ್ಕರೇ ಅದಕ್ಕೆ ಹೇಳುವವರು, ಕೇಳುವವರು ಯಾರು ಇಲ್ಲವೆಂದರೇ ಸಾಕು ಒತ್ತುವರಿ ಮಾಡುವ ಸಂಪ್ರದಾಯ ಎಲ್ಲೆಡೆ ಇದೀಗ ಸರ್ವೇಸಾಮಾನ್ಯ ಆಗಿ ಬಿಟ್ಟಿದೆ. ಅಂತಹದೇ ಒಂದು ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಹೌದು, ಇಲ್ಲಿನ ಕುಸುಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂಬರ್ 760/1/1ಬ/2 ರಲ್ಲಿ ಕವಿತಾ ಪ್ರವೀಣ ಅಂಗಡಿ ಎಂಬಾತರು ಸರಿಸುಮಾರು 1 ಎಕರೆ 20 ಗುಂಟೆಯ ಜಾಗವನ್ನು ಕಳೆದ ಕೆಲವು ವರ್ಷಗಳ ಹಿಂದೆ ವಾಣಿಜ್ಯಕ್ಕಾಗಿ ಭೂಮಿಯನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ. ಈ ವೇಳೆ ನೈಸರ್ಗಿಕವಾಗಿ ನೀರು ಹರಿದು ಹೋಗುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಅತಿಯಾದ ಮಳೆ ಬಂದ್ರೆ ಅಕ್ಕಪಕ್ಕದ ಜಮೀನನ ರೈತರ ಹೊಲಗಳಿಗೆ ನೀರು ನುಗ್ಗುವ ಪ್ರಸಂಗ ಏರ್ಪಟಿದೆ.
ಈ ಬಗ್ಗೆ ಈಗಾಗಲೇ ಕುಸುಗಲ್ ಗ್ರಾಮಸ್ಥರು 2022 ಜೂನ್ 23 ರಂದೇ ಮನವಿ ನೀಡಿ, ರಾಜಕಾಲುವೆ ಅತಿಕ್ರಮಣ ತೆರವು ನೀಡಲು ಮನವಿ ಸಲ್ಲಿಸಿದ್ದಾರೆ. ಅದಾಗ್ಯೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿಕಾಂತರೆಡ್ಡಿ ಮಂಟೂರ ನಾಮಕಾವಸ್ತೆ ಎಂಬಂತೆ 2022 ಜುಲೈ 6 ರಂದು ಒಂದು ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆಂಬ ಆರೋಪ ಸಹ ಇದೆ.
ಹೀಗಾಗಿ ನೋಟಿಸ್ ನೀಡಿ ಎರಡು ವರ್ಷ ಕಳೆದರೂ ಸಹ ಈವರೆಗೆ ರಾಜಕಾಲುವೆ ಅತಿಕ್ರಮಣ ಮಾತ್ರ ತೆರವು ಆಗಿಲ್ಲ, ರೈತರು ಮಳೆಗಾಲ ಬಂದಾಗೊಮ್ಮೆ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ.
ಈ ಕುರಿತು ಗ್ರಾಮಸ್ಥರು ನಿಮ್ಮ ದಿನವಾಣಿಗೆ ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ರಂಗಿನಾಟ? ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಬಿತ್ತರ ಮಾಡಿತ್ತು. ಈ ಸುದ್ದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತೇವೆ. ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ ಎಂಬ ಸಬೂಬು ಹೇಳಿದ್ದರು.
ಇಷ್ಟಾದರೂ ಗ್ರಾಮದ ಸಮಗ್ರ ಹಿತಕಾಯಬೇಕಾದ ಅಧಿಕಾರಿ ವರದಿ ಪ್ರಸಾರಗೊಂಡು ತಿಂಗಳು ಕಳೆಯುತ್ತಾ ಬಂದರು ರಾಜಕಾಲುವೆ ರಕ್ಷಣೆ ಕಾರ್ಯ ಮಾಡಲಿಲ್ಲ, ನಡುವೆ ಪ್ರಭಾವಿಗಳ ಕೃಪಕಟಾಕ್ಷವು ಇಲ್ಲಿ ಇದೆ ಎಂಬುದು ತಿಳಿದುಬಂದಿತು. ಹೀಗಾಗಿ ಅನಿವಾರ್ಯವಾಗಿ ನಿಮ್ಮ ದಿನವಾಣಿ ಎರಡು ವರ್ಷದ ನೋಟಿಸ್’ಗೆ ಬೆಲೆ ಇಲ್ಲ? ಏನಿದು ಕಣ್ಣಾ ಮುಚ್ಚಾಲೆ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗಿತು. ಪಿಡಿಓ ಅಧಿಕಾರಿಗಳು ಇದಕ್ಕೂ ಖ್ಯಾರೆ ಎನ್ನದೇ ಮಾಧ್ಯಮಕ್ಕೆ ಹಾರಿಕೆ ಉತ್ತರ ನೀಡುವ ಕೆಲಸ ಮಾಡಿ ಜಾಣಮೌನಕ್ಕೆ ಜಾರಿದ್ದರು.
ಇದೀಗ ನೂತನವಾಗಿ ದಕ್ಷ ಅಧಿಕಾರಿ ಪ್ರಕಾಶ ಹೊಳೆಪ್ಪಗೋಳ ಗ್ರಾಮೀಣ ತಹಶಿಲ್ದಾರ ಆಗಿ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ತನಕ ನಮ್ಮ ಸುದ್ದಿ ನಿರಂತರವಾಗಿ ಬಿತ್ತರವಾಗಿರಲಿದ್ದು, ಇದೇ ರೀತಿಯಲ್ಲಿ ಗ್ರಾಮದ ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಪ್ರಭಾವಿ ಬಗ್ಗೆ ಸುದ್ದಿಯನ್ನು ನಿಮ್ಮ ದಿನವಾಣಿ ಹೊರಹಾಕಲಿದ್ದು, ಕಾದು ನೋಡಿ.