ಮನಕ್ಕೆ ಮುದ ನೀಡುವ ಮಳೆಯೆಂಬ ಜಾದುಗಾರ…!
ಜೂನ್ ತಿಂಗಳು ಬಂತೆಂದರೆ ಸಾಕು ಆಕಾಶವೇ ಧರೆಗಿಳಿದಂತಾಗಿದೆ…ಇಡೀ ದಿನ ಕತ್ತಲ ಅನುಭವ ,ಮಂಜಿನಿಂದ ಆವರಿಸಿದ ಸುತ್ತಣ ಪ್ರದೇಶ. ಕಣ್ಮನ ಸೆಳೆಯುವ ಪ್ರಕೃತಿ.
“ಮಳೆ ಮಳೆ ಸೋನೆ ಮಳೆ”
ಮೇಲ್ನೋಟಕ್ಕೆ ಮಳೆಯ ಅಬ್ಬರಕ್ಕೆ ಹೊರಗಿಳಿಯುವುದೇ ಬೇಡವೆನಿಸಿದರೂ ,ಒಮ್ಮೆ ಇದರ ಗೆಳೆತನಕ್ಕೆ ಬಿದ್ದರೆ ಸಾಕು ನಮ್ಮನ್ನೇ ಮಕ್ಕಳನ್ನಾಗಿಸುತ್ತೆ.
ಹೌದು, ತುಂಟ ಮನಸ್ಸನ್ನು ಕಾಡುವ ಮಳೆ, ಹನಿ ಹನಿ ಸೇರಿ ಹಳ್ಳ, ಸಿಡಿವ ಹನಿ ಹನಿ ಇಬ್ಬನಿ, ಇದರ ನಡುವೆ ಒಮ್ಮೆ ಪುಟ್ಟ ಬೆಳಕಿನ ಝಳಕು. ಮಳೆ ಎಂಬ ಪದವನ್ನು ಕೇಳೋದೇ ಒಂದು ಸುಂದರ ಅನುಭವ. ಮಳೆಗಾಲವು ಗಿರಿ-ಶಿಖರ ವನ್ನು ಹೊಸ ಕಳೆ ಕಟ್ಟುವಂತೆ ಮಾಡುತ್ತದೆ. ಮನಸ್ಸಿಗೆ ಮುದ ನೀಡುವ ಸೋನೆಮಳೆ ಮಲೆನಾಡಿಗರಿಗೆ ಅಚ್ಚುಮೆಚ್ಚು. ಒಂದೇ ಸಮನೆ ಸುರಿಯುವ ಸೋನೆ ಮಳೆ ತಲೆಕೂದಲಿಗೆ ಸ್ಪರ್ಶಿಸಿ ಹೋಗೋ ತಣ್ಣನೆಯ ಗಾಳಿ ಭೂಮಿಯ ಮೇಲಿನ ಸ್ವರ್ಗ.
ಮಲೆನಾಡು ಇದು ಮಳೆನಾಡು
ಮಲೆನಾಡ ಸೋನೆಮಳೆ ವರ್ಣಿಸಲಸಾಧ್ಯ. ವರುಣದೇವನ ಕೃಪೆ ಹೆಚ್ಚಾಗಿದೆ ಇಲ್ಲಿ , ಸೂರ್ಯನ ಮುಖ ನೋಡದೆ ಕಳೆದ ದಿನಗಳೆಷ್ಟೋ, ಅಮ್ಮಂದಿರಿಗೆ ತಮ್ಮ ಪುಟ್ಟ ಮಕ್ಕಳ ಕಾಳಜಿಯ ಅವಾಂತರ.ವಿದ್ಯುತ್ ಚೆಲ್ಲಾಟವಂತು ಮಿತಿಮೀರಿದೆ. ಚಿಗುರಿನಿಂತ ಗಿಡ-ಮರ ಬಳ್ಳಿಗಳಲ್ಲಿ ಪಕ್ಷಿಗಳ ಚಿಲಿಪಿಲಿ ಹೆಚ್ಚಾಗಿದೆ ಮಳೆಯ ಹನಿಗಳಿಂದ ನೆಲವೆಲ್ಲ ಹಸಿರಾಗಿದೆ.
ಇಲ್ಲಿ ಮಳೆ ನಿಲ್ಲುವುದು ಅಲ್ಪ ಕಾಲಕ್ಕೆ ಮಾತ್ರ . ಮಳೆ ನಿಂತರಂತು ಅದು ಮೌನಕ್ಕೆ ಸರಿಸಮ. ಏಕಾಏಕಿ ಯುದ್ಧ ನಿಂತಂತೆ ಶಾಂತಿ. ಸುತ್ತಲೂ ಆವರಿಸಿರುವ ಮೋಡವಂತೂ ಗಿರಿಶಿಖರಗಳ ಮಧ್ಯೆ ಕೈಗೆಟುಕುವ ಅನುಭವ…..,
ಅಬ್ಬಬ್ಬಾ!…ಮಲೆನಾಡ ಹಂಚಿನ ಮನೆಗಳು ಅದೆಷ್ಟು ಸುಂದರ! ಮಳೆಗಾಲದಲ್ಲಿ ಪ್ರಕೃತಿಯ ಮಡಿಲಿನಲ್ಲಿ ಮಳೆಯನೀರು ಹಂಚಿನ ಮೇಲ್ಭಾಗದಿಂದ ಕೆಳಗೆ ಇಳಿಯುವುದನ್ನು ನೋಡುವುದು ಹಾಗೂ ಮನೆಯ ಬಾಗಿಲ ಮುಂದೆ ಒಂದೆರಡು ಹೆಜ್ಜೆ ಮುಂದಿಟ್ಟು ಸೂರಿನ ಮಳೆಗೆ ಕೈ ಒಡ್ಡಿದರೆ, ಸಾಕು ಕೈಬೆರಳ ತುದಿಯಲ್ಲಿ ಮಳೆಯೊಂದಿಗೆ ಆಟವಾಡುತ್ತಾ ನಾವು ಕೆಲದಿನಗಳವರೆಗೆ ಮಕ್ಕಳಂತಾಗುವ ಅನುಭವ.
ಇನ್ನು ಹಂಚಿನ ಮನೆಗಳಲ್ಲಿ ಹಂಚಿನ ಮದ್ಯೆ ಗಾಜಿನ ಬೆಳಕಿನ ಕಿಂಡಿಗಳನ್ನು ಬೆಳಕಿಗಾಗಿ ಅಳವಡಿಸಿರುತ್ತಾರೆ, ಇಲ್ಲಿ ರಾತ್ರಿ ಸಮಯದಲ್ಲಿ ಸುಳಿಯೋ ಮಿಂಚೋಒಂದು ಯಾರೋ ಆಕಾಶದಲ್ಲಿ ನಿಂತು ನಮ್ಮ ಫೋಟೋ ತೆಗಿತಿದ್ದರೇನೋ ಎಂದೆನಿಸುತದೆ. ಅಷ್ಟೇ ಅಲ್ಲ ಮಳೆ ನೀರು ಒಳನುಗ್ಗ ಬಾರದೆಂದು ಅಮ್ಮ ಪ್ಲಾಸ್ಟಿಕ್ ಚೀಲ ಒಂದನ್ನು ಅತ್ತ ಇತ್ತ ಎರಡು ಮೊಳೆ ಒಡೆದು ಬಾಗಿಲ ಚೌಕಟ್ಟಿಗೆ ನೇತು ಹಾಕಿರುತಾಳೆ.
ಇಷ್ಟೆಲ್ಲ ಚಿಕ್ಕ ಪುಟ್ಟ ಅನುಭವಗಳು ಸಂತೋಷಗಳು ಶ್ರೀಮಂತರ ಮನೆಗಳಲ್ಲಿ ಆಗಿರಲಿಕ್ಕಿಲ್ಲ. ಸಣ್ಣ ಮಕ್ಕಳು ಕೆಸರಿನ ನೀರಿನಲ್ಲಿ ಆಟವಾಡುತ್ತಾರೆ, ಅವರು ಕಾಗದದ ದೋಣಿಗಳನ್ನು ಸಹ ಮಾಡುತ್ತಾರೆ ಮತ್ತು ಅದರಲ್ಲಿ ಮೋಜಿನ ಆಟವಾಡುತ್ತಾ ಆನಂದಿಸುತ್ತಾರೆ. ಮಳೆಯ ನಂತರ ಆಕಾಶದಲ್ಲಿ ಕಾಮನಬಿಲ್ಲು ಅವರ ರೋಮಾಂಚನ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.
ಕೆಲ ಜನರು ಮನೆಯೊಳಗೆ ಇದ್ದು, ಮಳೆಯ ಸಪ್ಪಳವನ್ನು ಕೇಳುತ್ತಾ, ಬಿಸಿ ಚಹಾ, ಪಕೋಡಾವನ್ನು ಸವಿಯುತ ಕಿಟಕಿಗಳಿಂದ ಹೊರಗೆ ಇಣುಕಿ ನೋಡುತ್ತಾ ಅಥವಾ ತಮ್ಮ ಬಾಲ್ಕನಿಗಳು ಮತ್ತು ವರಾಂಡಾಗಳಲ್ಲಿ ಕುಳಿತುಕೊಂಡು ಮಳೆಯನ್ನು ಆನಂದಿಸುತ್ತಾರೆ.ಒದ್ದೆಯಾಗುವುದನ್ನು ತಪ್ಪಿಸಲು ಶಾಲೆಗೆ ಹೋಗುವ ಮಕ್ಕಳು ಮತ್ತು ಇತರ ಜನರು ಛತ್ರಿ ಮತ್ತು ರೈನ್‌ಕೋಟ್‌ಗಳೊಂದಿಗೆ ಓಡುವುದನ್ನು ಕಾಣಬಹುದು.
ಈ ಸೋನೇ ಮಳೆಯಿಂದಾಗಿ ನೀರಿನ ಮಟ್ಟವು ಹೆಚ್ಚಾಗುವುದಿಲ್ಲ , ರೈತರ ಬೆಳೆ ನಾಶವು ಇಲ್ಲ ..ಅಷ್ಟೇ ಅಲ್ಲದೆ ಸೋನೆ ಮಳೆಯು ರಸ್ತೆ ಗಳನ್ನೂ ಅಸ್ಥವ್ಯಸ್ಥ ಮಾಡುವುದಿಲ್ಲ ಇದರಿಂದಾಗಿ ಮಕ್ಕಳು ಶಾಲೆಗೆ ತಡವಾಗಿ ಬರುವ ಹಾಗು ಜನರು ತಮ್ಮ ಕೆಲಸ ಕಾರ್ಯ ಆಫೀಸು ಗಳಿಗೆ ತಡವಾಗಿ ಹೋಗುವ ಪ್ರಮೇಯವೂ ಎದುರಾಗುವುದಿಲ್ಲ.
ಮಳೆಗಾಲವು ವರ್ಷದ ಅತ್ಯಂತ ಅವಶ್ಯಕ ಮತ್ತು ನಿಸ್ಸಂದೇಹವಾಗಿ ಸಂತೋಷದಾಯಕ ಋತುವಾಗಿದೆ. ಕೃಷಿಯನ್ನು ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸುವ ದೇಶಗಳಿಗೆ ಈ ಸೋನೆಮಳೆ ಬಹುಮುಖ್ಯ….ಮಳೆಗಾಲದಲ್ಲಿ ದೀರ್ಘಕಾಲ ಕಾಯುತ್ತಿರುವ ಜನರು ಸುಡುವ ಶಾಖದಿಂದ ವಿಶ್ರಾಂತಿ ಪಡೆಯುತ್ತಾರೆ ಮತ್ತು ಸ್ವಚ್ಛವಾದ, ತಾಜಾ ಗಾಳಿಯನ್ನು ಅನುಭವಿಸುತ್ತಾರೆ. ಸಾಕಷ್ಟು ಪ್ರಮಾಣದ ಮಳೆಯು ಜನರಲ್ಲಿ ನೆಮ್ಮದಿಯ ಭಾವವನ್ನು ತರುತ್ತದ.
ಮಳೆನೀರನ್ನು ಕೊಯ್ಲು ಮಾಡುವುದು ಉತ್ತಮ ಏಕೆಂದರೆ ಮಳೆನೀರಿನ ಮೂಲಕ ಕೊಯ್ಲು ಮಾಡುವುದರಿಂದ ಭೂಮಿಯನ್ನು ಬರಡಾಗದಂತೆ ಉಳಿಸುತ್ತದೆ ಆದರೆ ಕಡಿಮೆ ಮಳೆ ಮತ್ತು ಅನಾವೃಷ್ಟಿಯ ಪರಿಸ್ಥಿತಿಗಳಲ್ಲಿಯೂ ಕೃಷಿ ಪ್ರಕ್ರಿಯೆಯನ್ನು ಮುಂದುವರಿಸಲು ರೈತರಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಹೆಚ್ಚು ಮರಗಳನ್ನು ನೆಡುವುದು. ಈ ಎಲ್ಲಾ ಅಂಶಗಳು ನಾವು ಮಳೆ ನೀರನ್ನು ಉಪಯೋಗಿಸಿಕೊಳ್ಳುವ ಮಾರ್ಗಗಳಾಗಿವೆ. ಮಳೆಗಾಲವು ಸಂಪೂರ್ಣ ಆನಂದದಾಯಕ ಕಾಲ…
ಒಟ್ಟಿನಲ್ಲಿ ಮಳೆ ಒಬ್ಬೂಬ್ಬರ ಜೀವನದಲ್ಲಿ ಒಂದೂಂದು ಅದ್ಭುತ ಕಹಾನಿಯೆ ಆಗಿದೆ. ಮಳೆ ಬಂತೆಂದರೆ ಸಾಕು ಹೀರಿಯ ಜೀವಗಳು ಒಂದು ಕ್ಷಣ ಕಿರಿಯ ಜೀವನಕ್ಕೆ ಮರಳುವದಂತು ಸತ್ಯ.
📝- ಸಹನಾ ಎಚ ವೈ