‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೊ ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ’. ಈ ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಅವರು ಮಿಲನ ಚಿತ್ರದ ಒಂದು ವಿರಹ ವೇದನೆಯ ಸನ್ನಿವೇಶದ ವಿವರಣೆಗಾಗಿ ಬರೆದಿದ್ದರು. ಆದರೆ ಇಂದು ಆ ಹಾಡು ಕೋಟ್ಯಾಂತರ ಅಭಿಮಾನಿಗಳಿಗೆ ಅವರ ನೆಚ್ಚಿನ ನಾಯಕನಟನ ಅಗಲಿಕೆಯ ದುಃಖದ ವಿವರಣೆಗಾಗಿ ಬರೆದ ಹಾಡೇನೊ ಎಂಬಂತಾಗಿದೆ. ಈ ಹಾಡಿನ ಸಾಲುಗಳಂತೆ ಒಂದು ದುರಂತಕರ ಘಟನೆಗೆ ನಾವೆಲ್ಲಾ ಸಾಕ್ಷಿಯಾಗಿದ್ದರೂ ಅದನ್ನು ನಂಬಲಾಗದೆ, ಒಪ್ಪಿಕೊಳ್ಳಲಾಗದೆ ಅದರ ದುಃಖದ ಹನಿಗಳನ್ನು ಅನುಭವಿಸುತ್ತಲೇ ಇದ್ದೇವೆ. 29 ಅಕ್ಟೋಬರ್ ಬೆಳಿಗ್ಗೆ ಸುಮಾರು 11 ಗಂಟೆಯಿಂದ ಶುರುವಾದ ಪುನೀತ್ ರಾಜಕುಮಾರ್ ಅವರ ಆರೋಗ್ಯ ಏರುಪೇರು ಎಂಬ ವರದಿಯಿಂದ ಹಿಡಿದು ಗಂಭೀರ ಸ್ಥಿತಿ, ನಂತರ ಕಲ್ಪನಾತೀತ ವರದಿಯಾಗಿ ಅವರ ನಿಧನ ಎಂಬ ಧೃಡೀಕೃತ ಸುದ್ದಿಯನ್ನು ಎಲ್ಲಾ ಟಿವಿ ಮಾಧ್ಯಮಗಳಲ್ಲಿ ವೀಕ್ಷಿಸಿದೆವು. ಏನಾಯಿತು, ಏಕಾಯಿತು, ಹೇಗಾಯಿತು ಎಂಬೆಲ್ಲಾ ತರ್ಕ ವಿಶ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ಎಲ್ಲವೂ ಮುಗಿದುಹೋಗಿತ್ತು.
ಅಂದು ಯಾರೊಬ್ಬರೂ ಕೂಡ ಕನ್ನಡದ ಅತ್ಯುತ್ತಮ ನಟನ ಅಕಾಲಿಕ ಮರಣದ ಬಗ್ಗೆ ಯಾವ ವ್ಯಾಖ್ಯಾನವನ್ನೂ ಮಾಡಲಾಗಲಿಲ್ಲ, ಆ ಸಂದರ್ಭದಲ್ಲಿ ಅವರ ಕೋಟ್ಯಂತರ ಅಭಿಮಾನಿಗಳ ದುಃಖವನ್ನು ಕಂಡು ಅವರಿಗೆಲ್ಲಾ ಅಪ್ಪು ಸರ್ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಾಡುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿತು. ನಿನ್ನೆ ತಾನೆ ಗುರುಕಿರಣ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಸಂಪೂರ್ಣ ಲವಲವಿಕೆಯಿಂದ ಭಾಗವಹಿಸಿದ್ದವರು, ಬೆಳಿಗ್ಗೆ ತಾನೆ ವರ್ಕೌಟ್ ಮಾಡಿ ಫಿಟ್ ಆಗಿ ಕಾಣುತ್ತಿದ್ದವರು ಸಂಜೆಯಷ್ಟರೊಳಗೆ ಇನ್ನಿಲ್ಲ ಎಂಬುದಾಗಿ ಎಲ್ಲೆಡೆ ಸುದ್ದಿಯಾಯಿತು. ತಮ್ಮ ನೆಚ್ಚಿನ ನಟ ಹೀಗೆ ಕಾರ್ಡಿಯಾಕ್ ಅರೆಸ್ಟ್ ನಿಂದ ಸಡನ್ ಡೆತ್ ಗೆ ಗುರಿಯಾದರು, ಇದರಿಂದ ಅವರ ದೇಹಾಂತ್ಯವಾಗಿದೆ ಎಂಬ ಹೃದಯವಿದ್ರಾವಕ ಸಂಗತಿಯನ್ನು ಅವರ ಅಭಿಮಾನಿಗಳಾದ ನಾವೆಲ್ಲ ಒಪ್ಪಿಕೊಳ್ಳುವಂತೆ ಯಾವ ತರ್ಕವೂ ವಿಶ್ಲೇಷಿಸಲಾಗದು, ಯಾವ ನ್ಯಾಯ-ನೀತಿ ಸಂಗತಿಗಳೂ ಉತ್ತರಿಸಲಾಗದು, ಯಾವ ಸಾಂತ್ವನ ನುಡಿಗಳೂ ಸಂತೈಸಲಾಗದು, ಯಾವ ಭಾವನಾತರಂಗಗಳೂ ಸಹಕರಿಸಲಾಗದು, ಯಾವ ಯೋಚನಾಲಹರಿಯೂ ನಿರ್ದೇಶಿಸಲಾಗದು, ಯಾವ ಜೀವನಸತ್ಯ ಭೋದನೆಗಳೂ ಆದೇಶಿಸಲಾಗದು. ಅಂದು ಯಾರೋ ದೊಡ್ಡವ್ಯಕ್ತಿ, ಅತ್ಯುತ್ತಮ ನಟ ನಿಧನರಾದರು ಎಂಬ ಭಾವದಿಂದ ನಾವು ಹೆಚ್ಚು ಶೋಕಿಸಲಿಲ್ಲ, ನಮ್ಮ ಮನೆಯ ಮಗನೋ ನಮ್ಮ ಪ್ರೀತಿಪಾತ್ರ ಸಹೃದಯಿಯೋ ನಿಧನರಾದರು ಎಂಬಂತೆ ಶೋಕಿಸಿದೆವು. ಆ ದಿನ ನಮ್ಮ ಕರುನಾಡನ್ನು ಮುಖ್ಯವಾಗಿ ಒಳಗೊಂಡಂತೆ ಇಡೀ ದೇಶದಲ್ಲೇ ಒಂದು ರೀತಿಯ ಭರಸಿಡಿಲಿನ ಸುದ್ದಿಯಾಗಿ ಈ ಸಂಗತಿ ಎಲ್ಲರನ್ನೂ ದುಃಖದ ಮಡುವಿನಲ್ಲಿ ಮುಳುಗಿಸಿತು.
ಅಂದು ಎಲ್ಲರ ಯೋಚನೆ, ಚಿಂತನೆ, ಕಾರ್ಯಗಳು ಒಮ್ಮಲೆ ಸ್ತಬ್ಧವಾಗಿ ನಿದ್ರಿಸಿದವು. ಮತ್ತೆ ಬೆಳಿಗ್ಗೆ ಜಾಗೃತವಾದರೆ ಕಣ್ಣಮುಂದೆ ಅದೇ ಸುದ್ದಿ, ಅದೇ ಕಾಡುವ ಹಸನ್ಮುಖ. ಎಲ್ಲರ ಮನದಲ್ಲೂ ಒಂದೇ ಕೋರಿಕೆ: “ದೇವರೇ ಈ ಜೀವನದಲ್ಲಿ ಆ ಒಂದು ದಿನ ಹಿಂದೆ ಹೋಗಿಬಿಡಲಿ. ಆ ಒಂದು ಅಮೂಲ್ಯಜೀವ ಉಳಿದುಬಿಡಲಿ. ಈ ಒಂದೇ ಒಂದು ದುಃಖಕರ ಸಂಗತಿ ಸುಳ್ಳಾಗಿಬಿಡಲಿ”.ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟರಾಗಿದ್ದರೆ ಬಹುಶಃ ಇಂದು ನಾವು ಇಷ್ಟೊಂದು ದುಃಖತಪ್ತರಾಗುತ್ತಿರಲಿಲ್ಲ. ಅವರೊಬ್ಬ ಮಹೋನ್ನತ ಆದರ್ಶ, ಮೌಲ್ಯ, ಧ್ಯೇಯಗಳನ್ನನುಸರಿಸಿ ಜೀವನ ಸಾಗಿಸುತ್ತಿದ್ದ ರಾಜಕುಮಾರರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರಾಗಿರುವ, ಕನ್ನಡವನ್ನೇ ತನ್ನ ಉಸಿರಾಗಿಸಿಕೊಂಡು ಬದುಕಿದ, ಕನ್ನಡದಿಂದ ಬೇರ್ಪಡಿಸಲಾಗದ ಕಾಯಕ ಯೋಗಿ ಡಾ.ರಾಜಕುಮಾರ್ ಅವರ ಮುದ್ದಿನ ಕಂದನಾಗಿದ್ದ ಅಪ್ಪು ಸರ್ ಅವರು ಅಕ್ಷರಶಃ ರಾಜನಾಗಿಯೇ ಧರೆಗಿಳಿದರು, ರಾಜನಂತೆಯೇ ಬದುಕಿ ಬಾಳಿದರು. 25 ಲಕ್ಷಕ್ಕೂ ಅಧಿಕ ಅಭಿಮಾನಿಗಳಿಂದ ಬೀಳ್ಕೊಳ್ಳುವಷ್ಟರ ಮಟ್ಟಿಗಿನ ಭಾಗ್ಯವಂತನ ಜೀವನವನ್ನು ನಡೆಸಿ ಮಹಾರಾಜನಂತೆ ನಿರ್ಗಮಿಸಿದರು. ಅಣ್ಣ ಅವರ ಮಗ ಎಂಬ ಶ್ರೇಷ್ಠ ಸ್ಥಾನವನ್ನು ಹೊಂದಿದ್ದ ಅವರು ಹಿರಿಮೆ-ಗರಿಮೆ, ಅಹಂಕಾರ, ಲೋಭ, ಐಶ್ವರ್ಯ ಮುಂತಾದವುಗಳ ಅವ್ಯಾಹತ ಆಕ್ರಮಣದಿಂದ ತಪ್ಪಿಸಿಕೊಂಡು ತಮ್ಮ ಮೇಲಿದ್ದ ಪ್ರೀತಿ, ವಿಶ್ವಾಸ, ಜವಾಬ್ದಾರಿಯನ್ನು ಉಳಿಸಿಕೊಳ್ಳಬೇಕಾದ ಮಹತ್ತರ ಉತ್ತರದಾಯಿತ್ವವನ್ನು ಪಡೆದಿದ್ದರು. ಈ ಉತ್ತರದಾಯಿತ್ವವನ್ನು ಸಂಪೂರ್ಣ ಯಶಸ್ವಿಯಾಗಿ ಪೂರೈಸುವುದರ ಜೊತೆಗೆ ಮೇರುನಟ ಡಾ.ರಾಜಕುಮಾರ್ ಅವರ ಪುತ್ರನಾಗಿ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದರೂ ಈ ರೀತಿ ವಿನಯವಂತನಾಗಿ ಬದುಕಬಹುದೆ ಎಂಬುವಷ್ಟರ ಮಟ್ಟಿಗೆ ಜೀವಿಸಿ, ಅವರಂತಹ ಸಜ್ಜನ ನಟನ ಅಭಿಮಾನಿಯಾಗದೆ ಬೇರೆ ದಾರಿಯೇ ಇಲ್ಲವೆಂಬಂತೆ ಜನರಿಗೇ ತಮ್ಮನ್ನು ಪ್ರೀತಿಸಬೇಕಾದ ಜವಾಬ್ದಾರಿಯನ್ನು ವಹಿಸಿದರು.
ಮೊದಲೇ ತಿಳಿಸಿದಂತೆ ಇವರು ಕೇವಲ ನಾಯಕನಾಗಿ ನಟಿಸುವ ಕಾರ್ಯವನ್ನು ಮಾತ್ರ ಮಾಡದೆ, ನೈಜ ಜೀವನದಲ್ಲೂ ನಾಯಕನಾಗಿ ಎಲ್ಲರ ಹೃದಯಗಳನ್ನು ಗೆದ್ದರು. ತಮ್ಮ ತಂದೆಯವರ ಮಾರ್ಗದಲ್ಲೇ ಸಾಗಿದ ಅಪ್ಪು ಸರ್ ಅವರು ಇಂದಿನ ಜನಾಂಗದವರ ಪಾಲಿಗೆ ಡಾ. ರಾಜಕುಮಾರ್ ಅವರ ಸ್ಥಾನವನ್ನು ತುಂಬಿದರು ಎಂದರೆ ತಪ್ಪಾಗಲಾರದು. ಸರ್ಕಾರದ ಪ್ರಾಯೋಜಿತ ಜನಕಲ್ಯಾಣ ಜಾಹೀರಾತುಗಳಲ್ಲಿ ನಟಿಸುವ ವಿಷಯದಲ್ಲಾಗಲಿ, ನಾಡು-ನುಡಿ ವಿಚಾರದಲ್ಲಿ ಎಂದಿಗೂ ಅಚಲವಾಗಿರುವ ವಿಷಯದಲ್ಲಾಗಲಿ, ಸುಸಂಸ್ಕೃತ ಕೌಟುಂಬಿಕ ಚಿತ್ರಗಳನ್ನು ಜವಾಬ್ದಾರಿಯುತವಾಗಿ ಆರಿಸಿಕೊಂಡು ಅಭಿಮಾನಿದೇವರುಗಳ ವಿಶ್ವಾಸವನ್ನು ಧೃಡಪಡಿಸುವ ವಿಷಯದಲ್ಲಾಗಲಿ, ಸಂಗೀತಲೋಕದಲ್ಲಿ ಗಾಯನದ ಕೊಡುಗೆ ನೀಡಿ ಚಿತ್ರಗಳಿಗೆ ಉತ್ಸಾಹದ ಮೆರುಗು ತಂದುಕೊಡುವ ವಿಷಯದಲ್ಲಾಗಲಿ ಅವರು ತಮ್ಮ ತಂದೆಯ ಮಾರ್ಗವನ್ನೇ ಅನುಸರಿಸಿದರು. ರಾಜಕುಮಾರ ಸಿನಿಮಾದ ಅಭಿನಯದ ಮೂಲಕ ವೃತ್ತಿಜೀವನದ ಗರಿಷ್ಠ ಹಂತವನ್ನು ತಲುಪಿದ ಇವರು ನಿಜಜೀವನದಲ್ಲೂ ಶಕ್ತಿಧಾಮ ನಿರ್ಮಾಣದಿಂದ ಸಾವಿರಾರು ಹೆಣ್ಣು ಮಕ್ಕಳಿಗೆ ಆಸರೆಯಾಗುವ, ಅನಾಥಾಶ್ರಮ-ವೃದ್ಧಾಶ್ರಮಗಳ ನಿರ್ಮಾಣದಿಂದ ಸಾವಿರಾರು ನಿರಾಶ್ರಿತರಿಗೆ ಆಶ್ರಯ ನೀಡುವ ಮೂಲಕ ರಾಜಕುಮಾರನೇ ಆದರು.ಸಿನಿಮಾದಲ್ಲಿ ಅನಾಸಕ್ತರಾಗಿರುವ ವ್ಯಕ್ತಿಗಳೂ ಸಹ ಇಂದು ಅವರಿಗೆ ಅಶ್ರುತರ್ಪಣಗಳ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆಂದರೆ ಅದಕ್ಕೆ ಮುಖ್ಯ ಕಾರಣ ಅವರ ಈ ಎಲ್ಲಾ ಸಾಮಾಜಿಕ ಕಾರ್ಯಗಳೇ.
ಹಾಗೆಯೇ ಮತ್ತೊಂದು ಪ್ರಮುಖ ವಿಚಾರವೆಂದರೆ ಸರ್ವಪ್ರಿಯವಾಗಿದ್ದ ಅಪ್ಪು ಸರ್ ಅವರ ವಿನಮ್ರ ವ್ಯಕ್ತಿತ್ವ. ಅವರ ಒಡನಾಡಿಗಳು, ಪರಿಚಯಸ್ಥರು, ಅಭಿಮಾನಿಗಳು ಯಾರೊಬ್ಬರೂ ಸಹ ಅವರ ಬಗ್ಗೆ ನನಗೆ ಮುನಿಸು, ಕೋಪ, ದ್ವೇಷ ಎಂದು ಹೇಳೇ ಇಲ್ಲ ಅಥವಾ ಇರುವಂತೆ ತೋರ್ಪಡಿಸಿಕೊಂಡಿಯೂ ಇಲ್ಲ. ಎಂತಹ ವ್ಯಕ್ತಿಯಾದರೂ ಆಗಿರಲಿ, ಇವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಿದ್ದರು. ಬಾಲನಟನಾಗಿದ್ದಾಗಿನಿಂದ ಜನರ ಮನಸ್ಸಿನಲ್ಲಿ ಮೂಡಿದ ಅವರ ಮುಗ್ಧ, ವಿನಮ್ರ, ಗಾಂಭೀರ್ಯ, ಹಸನ್ಮುಖಿಯ ವ್ಯಕ್ತಿತ್ವವೇ ಅವರ ಅಂತ್ಯದವರೆಗೂ ಉಳಿದುಕೊಂಡಿತು. ಸಿನಿಮಾ ಪಯಣದ ಜೊತೆಜೊತೆಗೆ ನಡೆಸಿಕೊಂಡು ಬಂದ ಐತಿಹಾಸಿಕವಾದ ‘ಕನ್ನಡದ ಕೋಟ್ಯಾಧಿಪತಿ’ ಎಂಬ ಕಾರ್ಯಕ್ರಮದ ಮೂಲಕ ಇವರು ಕೋಟ್ಯಂತರ ಹೃದಯಗಳ ಅಧಿಪತಿಯಾಗಿ ಹೋದರು. ಸಿನಿಮಾಪ್ರಿಯರಲ್ಲದವರು, ಈ ಕಾಲದ ತಪಸ್ವಿ ವಿದ್ಯಾರ್ಥಿಗಳು ಹೀಗೆ ಇನ್ನಿತರ ಸಮಯಸಾಧಕರುಗಳನ್ನೂ ತಮ್ಮ ಅಭಿಮಾನಿಗಳನ್ನಾಗಿಸಿಕೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಂತೆಯೇ ಅನೇಕ ನಟರು ನಿರೂಪಕರಾಗಿ ಕಿರುತೆರೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೂ ಅವರು ಯಾರೂ ಕನ್ನಡದ ಕೋಟ್ಯಾಧಿಪತಿಯಂತಹ ಅತ್ಯುನ್ನತ ಕಾರ್ಯಕ್ರಮವನ್ನು ನಡೆಸಿಕೊಡಲಾಗಲಿಲ್ಲ.
ಅವರ ನಿಧನದ ಸುದ್ದಿ ಬಂದಾಗಿನಿಂದಲೂ ನಾವೆಲ್ಲಾ ಸುದ್ದಿವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೇವೆ. ಬಹುತೇಕ ಹಿರಿಯ ಕಲಾವಿದರು ತಾವು ಅಪ್ಪುವನ್ನು ಮಗುವಾಗಿದ್ದಾಗಿನಿಂದಲೂ ಆಡಿಸಿ ಬೆಳೆಸಿದೆವು, ಈಗ ನಮ್ಮ ಕಣ್ಣಮುಂದೆಯೇ ಹೀಗೆ ಅವನು ನಮ್ಮನ್ನು ಅಗಲಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಮಾತನಾಡುತ್ತಿರುವುದು ವಾಸ್ತವ ಸ್ಥಿತಿಯ ಪರಾಕಾಷ್ಠೆಯನ್ನು ಎತ್ತಿತೋರಿಸುತ್ತಿದೆ. ಇದರ ಜೊತೆಗೆ ಶಿವಣ್ಣ, ರಾಘಣ್ಣರೀರ್ವರು ಅವರ ಮನೆಯ ಕಿರಿಯ ಕುಡಿಯ ಅಗಲಿಕೆಯಿಂದ ಅದೆಷ್ಟು ಆಘಾತಕ್ಕೊಳಗಾಗಿದ್ದಾರೊ ಅದನ್ನು ಆಲೋಚಿಸಲೂ ಆಗುತ್ತಿಲ್ಲ. ಶಿವಣ್ಣ ಅವರು ಅಪ್ಪು ನಮಗೆ ಹಾಲು-ತುಪ್ಪ ಬಿಡುವ ಕಾರ್ಯವನ್ನು ಮಾಡುತ್ತಾನೆಂದು ತಿಳಿದುಕೊಂಡಿದ್ದೆವು, ಆದರೆ ಇಂದು ನಾವೇ ಆತನಿಗೆ ಆ ಕಾರ್ಯವನ್ನು ಮಾಡಬೇಕಾದ ಅನರ್ಥ ಪರಿಸ್ಥಿತಿ ಎದುರಾಗಿದೆ. ಅಪ್ಪು ನನಗೆ ತಮ್ಮನಲ್ಲ, ಮಗನೇ ಆಗಿದ್ದ. ನನ್ನ ಮಗುವನ್ನೇ ಕಳೆದುಕೊಂಡಷ್ಟು ನನಗೆ ದುಃಖವಾಗುತ್ತಿದೆ. ಅಪ್ಪು ಅಮರಶ್ರೀ ಎಂದು ಹೇಳಿರುವ ಮಾತುಗಳು ಮನಕಲಕುತ್ತಿವೆ. ‘ಪುತ್ರಶೋಕಂ ನಿರಂತರಂ’ ಎನ್ನುವಂತೆ ದೊಡ್ಮನೆಯ ಕಿರಿಯ ಮಗನ ನಿಧನವು ಸದಾಕಾಲದವರೆಗೆ ಇದ್ದೇ ಇರಲಿದೆ.
ಇಂತಹ ಸೌಜನ್ಯವಂತ ಮಾನವನಿಗೆ ಇಷ್ಟು ಬೇಗ ಹೇಗೆ ಸಾವು ಬಂದಿತು ಎಂಬುದನ್ನು ಅರ್ಥೈಸಿಕೊಳ್ಳುವುದು ಅಭಿಮಾನಿಗಳಾದ ನಮಗೆ ಸಾಧ್ಯವಿಲ್ಲ. ಇನ್ನು ಅವರ ಪತ್ನಿ ಹಾಗೂ ಮುದ್ದಾದ ಎರಡು ಹೆಣ್ಣುಮಕ್ಕಳು ತಮ್ಮ ಜೀವನದ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದಾರೆ ಎನ್ನಬಹುದು. ಈಶ್ವರನು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿ ಜೀವನವನ್ನು ಮತ್ತೆ ಪುನರಾರಂಭಿಸಲು ಶಕ್ತಿಯನ್ನು ನೀಡಲಿ ಎಂದಷ್ಟೇ ನಾವು ಪ್ರಾರ್ಥಿಸಬಹುದು. ಇಷ್ಟೆಲ್ಲಾ ಭಾವೋದ್ವೇಗಗಳನ್ನು ಒಳಗೊಂಡಿರುವ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಜವಾಬ್ದಾರಿಯುತ ಅಭಿಮಾನಿಗಳಾಗಿ ನಡೆದುಕೊಳ್ಳುವುದರ ಮೂಲಕ ಅವರ ಗೌರವವನ್ನು ಹೆಚ್ಚಿಸಬೇಕಿದೆ. ಅವರ ಕುಟುಂಬದವರೇ ವಿನಂತಿಸಿರುವಂತೆ ಅಭಿಮಾನಿಗಳ್ಯಾರು ಆತ್ಮಹತ್ಯೆಯಂತಹ ಮಹಾಪರಾಧವನ್ನು ಮಾಡಲೇಬಾರದು. ನಮ್ಮೆಲ್ಲರ ಬಾಳಲ್ಲಿ ಕ್ಷಣ ಕ್ಷಣವೂ ಸಾವು ಸನ್ನಿಹಿತವಾಗುತ್ತಿರುವುದು ಖಾತ್ರಿಯಾಗಿರುವಾಗ, ಸಾವು ಅನಿರೀಕ್ಷಿತವಾಗಿರಲೂಬಹುದು ಕಲ್ಪನಾತೀತವಾಗಿರಲೂಬಹುದು. ನಮ್ಮ ಕೈಯಲ್ಲಿರುವುದು ಪ್ರತಿಕ್ಷಣವೂ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದಾದ ಮಹಾವಕಾಶ. ಅಪ್ಪು ಸರ್ ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಬದುಕಿನ ಪ್ರತಿ ಹಂತದಲ್ಲೂ ಅವರನ್ನು ಸ್ಮರಿಸೋಣ. ಏಕೆಂದರೆ ವ್ಯಕ್ತಿಗೆ ಸಾವಿರಬಹುದು, ಆ ವ್ಯಕ್ತಿತ್ವಕ್ಕಲ್ಲ. ಏನೇ ಹೇಳಿ, ಎಷ್ಟೇ ವಿವರಿಸಿ ಅವರಿಗೆ ಆ ವ್ಯಕ್ತಿತ್ವಕ್ಕೆ ಎಂದಿಗೂ ವಿದಾಯ ಹೇಳಲಾಗದು. ಅವರ ಸ್ಥಾನವನ್ನು ಮತ್ತ್ಯಾರೂ ತುಂಬಲಾಗದು.
▶~ಸಿಂಚನ.ಎಂ.ಕೆ ಮಂಡ್ಯ