ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಬಂದಿದ್ದ ಅನ್ಯಕೋಮಿನ ಯುವಕನನ್ನು ಮತ್ತು ಅಪ್ರಾಪ್ತ ಬಾಲಕಿಯನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿ ಹೊರವಲಯದ ಗಬ್ಬೂರ ಬಳಿಯಲ್ಲಿ ಜರುಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವ್ಯಾಪ್ತಿಯ ಅನ್ಯಕೋಮಿನ ಯುವಕನೊರ್ವ ಅಪ್ರಾಪ್ತಳನ್ನು ಕರೆದುಕೊಂಡು ಬಂದಿದ್ದು, ಈ ವೇಳೆ ಇಲ್ಲಿನ ಗಬ್ಬೂರು ಬಳಿಯಲ್ಲಿ ಯುವಕ ಹಾಗೂ ಅಪ್ರಾಪ್ತ ಯುವತಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಯ ಸದಸ್ಯರು ವಿಚಾರಿಸಿದಾಗ ಮನೆಬಿಟ್ಟು ಬಂದಿರುವ ವಿಷಯ ಗೊತ್ತಾಗಿದೆ.
ಕೂಡಲೇ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಅನ್ಯಕೋಮಿನ ಯುವಕ ಹಾಗೂ ಯುವತಿಯನ್ನು ಬೆಂಡಿಗೇರಿ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ.
ಈ ವೇಳೆ ಪೋಲಿಸರು ವಿಚಾರಣೆ ನಡೆಸಿದಾಗ ಯುವಕ ಹಾಗೂ ಅಪ್ರಾಪ್ತ ಯುವತಿ ಮನೆಬಿಟ್ಟು ಓಡಿ ಬಂದಿದ್ದು, ಅಪ್ರಾಪ್ತ ಯುವತಿಯ ಕುರಿತು ಈಗಾಗಲೇ ಮುಧೋಳದಲ್ಲಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಸದ್ಯ ಬೆಂಡಿಗೇರಿ ಪೋಲಿಸರು ವಿಷಯವನ್ನು ಬಾಗಲಕೋಟೆ ಜಿಲ್ಲಾ ಪೋಲಿಸರಿಗೆ ತಿಳಿಸುವ ಕೆಲಸ ಮಾಡಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಇನ್ನು ಬೆಂಡಿಗೇರಿ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜೈ ಶ್ರೀರಾಮ ಘೋಷಣೆ ಮೊಳಗಿಸಿದ್ದಾರೆ.