ಹುಬ್ಬಳ್ಳಿ: ರೇವಣ್ಣ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ಒಪ್ಪಂದ ಇರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಮೇಲೆ ಸರ್ಕಾರ ಎಫ್ಐಆರ್ ಮಾಡಲಿಲ್ಲ. ಅಷ್ಟೇ ಅಲ್ಲದೇ ಪ್ರಜ್ವಲ್ ಅವರನ್ನು ಓಡಿ ಹೋಗೋಕ್ಕೆ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪೊಲೀಸರು ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಪ್ರಜ್ವಲ್ ವಿದೇಶಕ್ಕೆ ಹೋಗಲು ಬಿಜೆಪಿಯವರು ಸಹಾಯ ಮಾಡಿದ್ದಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೇಂದ್ರಕ್ಕೆ ಏನಾದರೂ ಕನಸು ಬೀಳತ್ತಾ? ಇವರು ಪ್ರಜ್ವಲ್ ಮೇಲೆ ಎಫ್ಐಆರ್’ನ್ನು ಯಾಕೆ ಬೇಗ ಮಾಡಲಿಲ್ಲ. ಎಫ್ಐಆರ್ ಆಗೋ ಮುಂಚೆ ಯಾಕೆ ಅರೆಸ್ಟ್ ಮಾಡಲಿಲ್ಲ. ಇದು ಆತ್ಯಂತ ಬೇಜಾವ್ದಾರಿ ಹೇಳಿಕೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಆದರೆ ಈ ಬಗ್ಗೆ ರಕ್ಷಣೆ ಮಾಡೋ ಪ್ರಶ್ನೆ ನಮ್ಮ ಮುಂದೆ ಇಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಕೇಸ್ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ನಮಗೇನೂ ಎಫೆಕ್ಟ್ ಆಗಲ್ಲ, ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಜೆಡಿಎಸ್ ಒಂದು ಇಂಡಿಪೆಂಡೆಂಟ್ ಪಕ್ಷ. ದೇವೆಗೌಡರ ಮೊಮ್ಮಗ ಆಗಿರೋ ಕಾರಣಕ್ಕೆ ಸ್ವಲ್ಪ ಸೆನ್ಸಿಟಿವ್ ಆಗಿದೆ ಎಂದರು.
ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಗೆ ಬರಲಿದ್ದಾರೆ. ಮೋದಿ ಅವರ ನಂತರ ದೇಶದಲ್ಲಿ ಅತ್ಯಂತ ಹೆಮ್ಮೆಯ ನಾಯಕರು. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ್ದಾರೆ. ಜನರಿಗೆ ಅವರನ್ನು ನೋಡೋ ಕಾತುರ ಇದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.