ಮಠಾಧೀಶರ ಒಗ್ಗಟ್ಟು ಮುರಿದ ರಾಜಕೀಯ ರಂಗಿನಾಟ
ಧಾರವಾಡ ಲೋಕಸಭಾ ಗುದಮುರಗಿ
ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರ ಹಾಗೂ ಸಂಪತ್ತಿನ ಮದದಿಂದ ಲಿಂಗಾಯತ ಸೇರಿದಂತೆ ಇನ್ನಿತರ ಸಮುದಾಯವನ್ನು ತುಳಿಯುವ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ ಅವರನ್ನು ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಬೇರೆಡೆ ವರ್ಗಾವಣೆ ಮಾಡಬೇಕು, ಅವರ ಜಾಗಕ್ಕೆ ಲಿಂಗಾಯತ ಸಮೂದಾಯದ ನಾಯಕನಿಗೆ ಅವಕಾಶ ಮಾಡಿಕೊಟ್ಟು, ಸಮೂದಾಯಕ್ಕೆ ನ್ಯಾಯ ಒದಗಿಸಬೇಕೆಂದು ಶಿರಹಟ್ಟಿಯ ಫಕೀರ ಶ್ರೀ ದಿಂಗಾಲೇಶ್ವರ ಶ್ರೀಗಳು ಮೊನ್ನೆ ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ಚಿಂತನ ಮಂಥನ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ನೇರಾನೇರವಾಗಿ ಪ್ರಲ್ಹಾದ್ ಜೋಶಿ ವಿರುದ್ಧ ಕಿಡಿಕಾರಿದರು.
ಇದಕ್ಕೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಮಠಾಧಿಪತಿಗಳು ಬೆಂಬಲ ಸೂಚಿಸಿದರು.
ಈ ಮೂಲಕ ಖಾವಿ ಜನರ ಕಲ್ಯಾಣಕ್ಕೆ ರಾಜಕಾರಣಕ್ಕೆ ಬಂದ್ರೆ ತಪ್ಪಿಲ್ಲ ಎಂಬ ನಿರ್ಣಯವನ್ನು ಶ್ರೀಗಳು ತೆಗೆದುಕೊಂಡಿದ್ರು, ಆದರೆ ಇದೀಗ ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಲ್ಟಾ ಹೊಡೆದಿದ್ದು, ಫಕೀರ್ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ವೈಯಕ್ತಿಕವಾದದ್ದು, ಅವರ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ, ಹೆಚ್ಚಾಗಿ ಮುರುಘಾಮಠ ರಾಜಕೀಯ, ರಾಜಕಾರಣದಿಂದ ದೂರವಿದೆ ಎಂದು ತಿಳಿಸಿದ್ದಾರೆ. ಈ ಮೂಲದ ಪತ್ರಿಕಾಗೋಷ್ಠಿಯಲ್ಲಿ ದಿಂಗಾಲೇಶ್ವರ ಶ್ರೀಗಳ ಪಕ್ಕದಲ್ಲೇ ಕುಳಿತು, ಇದೀಗ ಬೇರೆ ತರಹ ಹೇಳಿಕೆ ನೀಡುತ್ತಿರುವುದು ಇದೀಗ ಭಕ್ತರು ಸ್ವಾಮೀಜಿಗಳ ನಡೆ ಬಗ್ಗೆ ಅನುಮಾನ ಪಡುವಂತಾಗಿದೆ.
ಅಷ್ಟೇ ಅಲ್ಲದೇ ಮಠಗಳ ಮಠಾಧಿಪತಿಗಳ ಒಗ್ಗಟ್ಟಿನ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಕ್ಷೇತ್ರ ಇದೀಗ ರಣಕಣವಾಗಿ ಮಾರ್ಪಟ್ಟಿದ್ದು, ದಿಂಗಾಲೇಶ್ವರ ಶ್ರೀಗಳು ಪ್ರಲ್ಹಾದ್ ಜೋಶಿ ಬದಲಾವಣೆ ಪಟ್ಟು ಮುಂದುವರೆಸಿ ಮಾ.31 ಗಡುವು ನೀಡಿದ್ದು, ಅಲ್ಲಿಯವರೆಗೆ ಏನೆಲ್ಲಾ ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.