ವರ್ಗಾವಣೆ ಆದೇಶಕ್ಕೆ ಕಿಮ್ಮತ್ತಿಲ್ಲಾ ! ಏಳೆಂಟು ವರ್ಷ ಒಂದೇ ಕುರ್ಚಿಗೆ ಅಧಿಕಾರಿ ಭದ್ರ…
ಕುಂದಗೋಳ : ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ ಸುವ್ಯವಸ್ಥಿತ ಆಡಳಿತ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳನ್ನು ಕನಿಷ್ಠ ಮೂರು ವರ್ಷ ಗರಿಷ್ಠ ಐದು ವರ್ಷದ ಅವಧಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಎಲ್ಲೇಡೆ ಜಾರಿಯಲ್ಲಿದೆ.
ಆದರೆ, ಈ ಪ್ರಕ್ರಿಯೆಗೆ ಕುಂದಗೋಳ ತಾಲೂಕು ಮಾತ್ರ ಹೊರತಾಗಿದ್ದು, ಕುಂದಗೋಳ ತಾಲೂಕಿನಲ್ಲಿ 6-8 ವರ್ಷಗಳಿಂದ ಒಂದೇ ಕುರ್ಚಿಗೆ ಅಂಟಿಕೊಂಡು ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣಿದ್ದು ಕರುಡರಂತಿದೆ.
ಹೌದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಪ್ರಭಾರಿ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಐ.ನಾಯ್ಕರ್ ಕಳೆದ ಏಳು ವರ್ಷಗಳಿಂದ ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದಲ್ಲದೆ ಬಿಇ ಸಿವಿಲ್ ಓದಿರುವ ಇವರು ಇಲ್ಲಿಯವರೆಗೆ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ಇತ್ತಿಚೆಗೆ ಇದೇ ಇಲಾಖೆಯ ಅಧಿಕಾರಿ ಎಇಇ ಶಂಭೋಜಿ ವೀರಕರ್ ವಯೋ ನಿವೃತ್ತಿ ನಂತರ ಎಂಟು ತಿಂಗಳಿಂದ ಪ್ರಭಾರಿ ಎಇಇ ಸ್ಥಾನ ಸಹ ಅಲಂಕರಿಸಿರುವ ಎ.ಐ.ನಾಯ್ಕರ್ ತಮ್ಮ ಕುರ್ಚಿಯನ್ನು ಎಲ್ಲಾ ಮೂಲಗಳಿಂದ ಭದ್ರಪಡಿಸಿಕೊಂಡು ಸರ್ಕಾರದ ವರ್ಗಾವಣೆ ಆದೇಶ ಮರೆತಿದ್ದಾರೆ ಮೇಲಾಧಿಕಾರಿಗಳು ಇತ್ತ ಗಮನಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಂಜಿನಿಯರಿಂಗ್ ಉಪವಿಭಾಗಕ್ಕೆ ಖಾಯಂ ಮುಖ್ಯ ಅಭಿಯಂತರರನ್ನು ನೇಮಿಸಲು ಇಲಾಖೆ ಸಹ ಕಣ್ಮುಚ್ಚಿ ಕುಳಿತಿರುವದು ಜನರಲ್ಲಿ ಸಂಶಯಕ್ಕೂ ಕಾರಣವಾಗಿದೆ.
ಅದರಂತೆ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾತ್ರ ಖಾಯಂ ಮುಖ್ಯ ಇಂಜಿನಿಯರ್ ಇಲ್ಲದೆ ಕಲಘಟಗಿ ಹಾಗೂ ಕುಂದಗೋಳ ಪ್ರಭಾರಿಯಾಗಿ ಶಿವಪುತ್ರಪ್ಪ ಮಠಪತಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯ ವ್ಯವಸ್ಥೆ ಕೇವಲ ಮೂರೇ ದಿನ ಅದು ಪ್ರಭಾರಿ ಮುಖ್ಯ ಇಂಜಿನಿಯರ್ ಲಭ್ಯವಿದ್ದಾಗ ಮಾತ್ರ ಎನ್ನುವಂತಾಗಿದೆ.
ಈ ಇಂಜಿನಿಯರ್ ಯಾವಾಗ ಬರ್ತಾರೆ ? ಯಾವಾಗ ಹೋಗ್ತಾರೆ ? ಎಂಬ ಸ್ಪಷ್ಟ ಮಾಹಿತಿ ಸಹ ಲಭ್ಯವಿರದಂತ ಸ್ಥಿತಿ ಇದೆ. ಇನ್ನೂ ಇದೇ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಕೊರತೆ ದಶಕಗಳಿಂದ ಜೀವಂತವಿದ್ದರೂ ಎಇಇ ಅವುಗಳನ್ನು ಭರಿಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.