ಯರಿಕೊಪ್ಪ ಗ್ರಾಮದಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಧಾರವಾಡ: ಜಿಲ್ಲೆಯ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಸೋನಿಯಾ ಪದವಿ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಏಳನೇ ದಿನ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯರಿಕೊಪ್ಪ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ಕುಮಾರ್ ಕೆ.ಎಫ್. ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಶಿಕ್ಷಣದ ಜೊತೆಗೆ ಸೇವಾಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಎನ್ಎಸ್ಎಸ್ ಮೂಲಕ ಗ್ರಾಮೀಣ ಜನರ ಬದುಕು, ರೈತರ ಜೀವನ ಶೈಲಿ, ಗ್ರಾಮ ಸ್ವಚ್ಛತೆ ಹಾಗೂ ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶಿಬಿರದ ಅವಧಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಸಮರ್ಪಕವಾಗಿ ನೆರವೇರಿಸಿದ ಎಲ್ಲ ಸ್ವಯಂಸೇವಕರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಸೋನಿಯಾ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಶ್ರೀನವೀನ್ ಎಚ್. ಡಂಬಳ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಯರಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಶ್ರೀ ಉಮೇಶ್ ಗೌಡ ಚ. ಪಾಟೀಲ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ್ ಎಚ್. ಜೋಗಿನ್ ವಹಿಸಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ಅವರು ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ವೇದಿಕೆಯಾಗಿದೆ ಎಂದು ಹೇಳಿದರು. ಗ್ರಾಮೀಣ ಜೀವನ ಶೈಲಿ, ಸ್ವಚ್ಛತೆ, ಆರೋಗ್ಯ ಮತ್ತು ಶಿಕ್ಷಣದ ವಿವಿಧ ಆಯಾಮಗಳನ್ನು ಅರಿತುಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು. ಏಳು ದಿನಗಳ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಗಂಗಾಧರ ಮರಳಿಹಳ್ಳಿ ಹಾಗೂ ಉಪನ್ಯಾಸಕ ವೃಂದವನ್ನು ಅಭಿನಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಯಶಸ್ವಿಯಾಗಿ ಶಿಬಿರವನ್ನು ಆಯೋಜಿಸಿದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಗಂಗಾಧರ ಎಸ್.ಎಂ. ಅವರನ್ನು ಗ್ರಾಮ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಸಂಸ್ಥೆಯ ನಿರ್ದೇಶಕರು ಸನ್ಮಾನಿಸಿದರು. ಶಿಬಿರಾರ್ಥಿಗಳ ಸೇವಾ ಮನೋಭಾವಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.




