ಹುಬ್ಬಳ್ಳಿ: ಪತಿಯೇ ಪತ್ನಿಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ ಪ್ರಕರಣ ಸಾಬೀತಾಗಿದ್ದು, ಈ ಪ್ರಕರಣವನ್ನು ವಿಚಾರಣೆ ನಡೆಸಿದ 1 ನೇ ಅಧಿಕ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯ ಚಾಲುಕ್ಯ ರಸ್ತೆ ನಿವಾಸಿ ಕಿಶೋರ ಬಮ್ಮಾಜಿ(31) ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದು, 2018 ಮಾ. 23 ರಂದು ಪತ್ನಿಯಾದ ಲೆವಿನಾ ಬಮ್ಮಾಜಿ(24) ಇವಳ ಮೊಬೈಲ್‌ಗೆ ಬೇರೆ ವ್ಯಕ್ತಿಯ ಕರೆ ಬಂದ ಕಾರಣ ಅವಳ ಮೇಲೆ ಸಂದೇಹ ಪಟ್ಟು ಮೊದಲು ಸ್ಟಿಲ್ ಪೊರಕೆಯಿಂದ ಹಲ್ಲೆ ಮಾಡಿದ್ದಾನೆ. ನಂತರ ವಾಟರ್ ಹಿಟರ್ ವಾಯರ್ ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಗೈದಿದ್ದನು.
ನಂತರ ಯಾರಿಗೂ ತಿಳಿಯದಂತೆ ಸಾಕ್ಷಿಗಳನ್ನು ನಾಶ ಪಡಿಸಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದನು. ಇದಾದ ಬಳಿಕ ಯುವತಿಯ ಮನೆಯವರು ತಮ್ಮ ಮಗಳ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸುವಂತೆ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ವೈದ್ಯಕೀಯ ತಪಾಸಣೆಯಿಂದ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಂದಿನ ಪೊಲೀಸ್ ಅಧಿಕಾರಿ ಡಿ. ಆರ್. ಗಡ್ಡೆಕರ ದೋಷಾರೋಪಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುತ್ತಾರೆ. ಸರ್ಕಾರ ಪರ ಅಭೀಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕೇಶ್ವಾಪುರ ವಿನೂತನ ಕಾಲನಿ ನಿವಾಸಿ ಕಿಶೋರ ಬಮ್ಮಾಜಿ ಆಂಧ್ರಪದ್ರೇಶದ ಗುಂಟೂರು ಜಿಲ್ಲಾ ತಾಡಪಲ್ಲಿಯ ಲೆವಿನಾ ಎಂಬಾಕೆಯನ್ನು 2011 ರಲ್ಲಿ ಮದುವೆಯಾಗಿದ್ದ, ಆದರೆ ಕಿಶೋರ ಸೇರಿದಂತೆ ಅವರ ಕುಟುಂಬಸ್ಥರು ಲೆವಿನಾ ಮೇಲೆ ಸಂದೇಹ ಮಾಡುತ್ತಿದ್ದರು. ಈ ಕಾರಣಕ್ಕೆ ಕಿಶೋರ ಬೇರೆ ಮನೆ ಮಾಡಿ ವಾಸವಾಗಿದ್ದರು. ಅಷ್ಟಾದರೂ ಲೆವಿನಾ ಮೇಲೆ ಮತ್ತೆ ಕಿಶೋರ ಅನುಮಾನ ಪಡುತ್ತಾ ಹಲ್ಲೆ ಮಾಡುತ್ತಿದ್ದನು. ಈ ಕಾರಣದಿಂದ ಬೆಸತ್ತ ಲೆವಿನಾ ತವರುಮನೆಗೆ ಹೋಗಿರುತ್ತಾರೆ. ಆಗಲೂ ಕಿಶೋರ ಇಲ್ಲಸಲ್ಲದನ್ನು ಹೇಳಿ ಮತ್ತೆ ಕರೆದುಕೊಂಡು ಬಂದಿರುತ್ತಾನೆ. 2018 ಮಾರ್ಚ್ 23 ರಂದು ಮಧ್ಯಾಹ್ನ 1.30 ಕ್ಕೆ ಮೊಬೈಲ್‌ಗೆ ಬೇರೆ ವ್ಯಕ್ತಿಯ ಕರೆ ಬಂದಿದೆ ಎಂದು ಅನುಮಾನ ಪಟ್ಟು, ಲೆವಿನಾವನ್ನು ಕೊಲೆ ಮಾಡಿದ್ದನು.