
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡನಲ್ಲಿ ಭಕ್ತಿ ಮತ್ತು ಪರಂಪರೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗುವಂತಹ ವಿಶಿಷ್ಟ ಆಚರಣೆ ಮತ್ತೆ ಜೀವಂತವಾಗಿದೆ. ಅಧಿದೇವತೆ ತಾಯಿ ಮಾರಿಕಾಂಬಾ ದೇವಿಯ ಜಾತ್ರೆಯ ಅಂಗವಾಗಿ ನಡೆಯುವ ‘ಹೊರಬೀಡು’ ಸಂಪ್ರದಾಯದಂತೆ ಇಡೀ ಊರಿನ ಜನತೆ ಮನೆಗಳಿಗೆ ಬೀಗ ಹಾಕಿ ಊರ ಗಡಿ ದಾಟುವ ಮೂಲಕ ಗಮನ ಸೆಳೆದಿದ್ದಾರೆ.
ಮಾರಿಕಾಂಬಾ ದೇವಿಯ ಜಾತ್ರಾ ಸಂದರ್ಭದ ಮೂರು ಮಂಗಳವಾರಗಳು ಹಾಗೂ ಎರಡು ಶುಕ್ರವಾರಗಳಂದು ಮುಂಡಗೋಡಿನ ಪ್ರತಿಯೊಬ್ಬ ನಾಗರಿಕನು ಬೆಳಿಗ್ಗೆ 10 ಗಂಟೆಗೆ ಮುನ್ನ ಮನೆಯಲ್ಲಿ ದೇವಿಗೆ ಪೂಜೆ ಸಲ್ಲಿಸಿ, ಅಡುಗೆ ಸಿದ್ಧಪಡಿಸಿಕೊಂಡು ಕುಟುಂಬ ಸಮೇತವಾಗಿ ಹೊಲ-ಗದ್ದೆ, ತೋಟ ಅಥವಾ ಊರ ಹೊರವಲಯಕ್ಕೆ ತೆರಳುವುದು ಇಲ್ಲಿನ ಅನಾದಿಕಾಲದ ಪದ್ಧತಿ. ಈ ಸಮಯದಲ್ಲಿ ಮುಂಡಗೋಡು ಪಟ್ಟಣ ಸಂಪೂರ್ಣವಾಗಿ ನಿಶ್ಶಬ್ದಕ್ಕೆ ಜಾರುತ್ತದೆ.

ಈ ಸಂಪ್ರದಾಯದ ಹಿಂದೆ ಗಾಢ ನಂಬಿಕೆಯಿದೆ. ಊರಿನ ಜನರೆಲ್ಲರೂ ಹೊರಬೀಡು ಹೋಗಿರುವ ವೇಳೆ ತಾಯಿ ಮಾರಿಕಾಂಬಾ ದೇವಿಯೇ ಊರಿನಲ್ಲಿ ಸಂಚರಿಸಿ ದುಷ್ಟ ಶಕ್ತಿಗಳನ್ನು ಸಂಹರಿಸಿ, ಗ್ರಾಮವನ್ನು ರಕ್ಷಿಸುತ್ತಾಳೆ ಎಂಬುದು ಭಕ್ತರ ಅಚಲ ವಿಶ್ವಾಸ. ಸಂಜೆ 4 ಗಂಟೆಯವರೆಗೂ ಯಾರೂ ಊರೊಳಗೆ ಪ್ರವೇಶಿಸುವುದಿಲ್ಲ. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯುತ್ತಾ ಎಲ್ಲರೂ ಒಟ್ಟಾಗಿ ಊಟ ಮಾಡುವುದೇ ಈ ಆಚರಣೆಯ ವಿಶೇಷ.
ಸ್ಥಳೀಯ ನಿವಾಸಿ ಗಿರಿಜಾ ಮಾತನಾಡಿ, “ಇದು ನಮ್ಮ ಪೂರ್ವಜರಿಂದ ನಡೆದುಕೊಂಡು ಬಂದ ಸಂಪ್ರದಾಯ. ದೇವಿಯ ಕೃಪೆಯಿಂದ ನಮ್ಮ ಊರು ಸದಾ ಸುಭಿಕ್ಷವಾಗಿರಲಿ ಎಂಬುದೇ ನಮ್ಮ ಆಶಯ” ಎಂದರು.

ಇನ್ನು ಊರು ಸಂಪೂರ್ಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದೆ. ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಊರಿನ ಎಲ್ಲ ಪ್ರವೇಶ ದ್ವಾರಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಜನರ ಆಸ್ತಿ-ಪಾಸ್ತಿ ಮತ್ತು ಸುರಕ್ಷತೆಗೆ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಆಧುನಿಕ ಯುಗದಲ್ಲೂ ಇಂತಹ ಸಾಂಪ್ರದಾಯಿಕ ಆಚರಣೆಗಳು ಉಳಿದುಕೊಂಡು ಬಂದಿರುವುದು ಮುಂಡಗೋಡಿನ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.
ವರದಿ: ವೆಂಕಟೇಶ ದಾಸರ




