
ಮುಂಡಗೋಡ: ಪಟ್ಟಣದಲ್ಲಿ ಗಿಫ್ಟ್ ಹಾಗೂ ಸ್ಟೇಷನರಿ ಅಂಗಡಿಗಳಲ್ಲಿ ಹಿಂದೂ ದೇವರ ಫೋಟೋ ಫ್ರೇಮ್‌ಗಳನ್ನು ರಸ್ತೆ ಬದಿಯ ಫುಟ್‌ಪಾತ್ ಮೇಲೆ ಇಟ್ಟು ಮಾರಾಟ ಮಾಡುತ್ತಿರುವುದನ್ನು ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ದೇವರ ಫೋಟೋಗಳನ್ನು ನೆಲದ ಮೇಲೆ ಇಡುವುದು ಹಿಂದೂ ಧರ್ಮದ ಪವಿತ್ರತೆಗೆ ಅವಮಾನವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಗಂಭೀರ ಧಕ್ಕೆಯಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಪಟ್ಟಣದ ಹಲವು ಅಂಗಡಿಗಳ ಮಾಲೀಕರು ಲಾಭದ ಉದ್ದೇಶದಿಂದ ದೈವ ಸ್ವರೂಪದ ಫೋಟೋಗಳನ್ನು ಸಾರ್ವಜನಿಕ ಫುಟ್‌ಪಾತ್ ಮೇಲೆ ಪ್ರದರ್ಶಿಸುತ್ತಿದ್ದು, ಇದು ದೇವರಿಗೆ ತೋರಿಸುವ ಅತಿರೇಕದ ಅನಾದರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ರೀತಿಯ ವರ್ತನೆ ಮುಂದುವರಿದರೆ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ಈ ಸಂಬಂಧ ಹಿಂದೂಪರ ಸಂಘಟನೆಗಳ ಪ್ರಮುಖರು ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಮೌಖಿಕ ದೂರು ಸಲ್ಲಿಸಿದ್ದು, ಕೂಡಲೇ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ದೇವರ ಫೋಟೋಗಳನ್ನು ಗೌರವಯುತವಾಗಿ ಇರಿಸಬೇಕು ಹಾಗೂ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಂಗಡಿ ಮಾಲೀಕರಿಗೆ ತಮ್ಮ ತಪ್ಪು ಸರಿಪಡಿಸಿಕೊಳ್ಳಲು ಎರಡು ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯೊಳಗೆ ಫುಟ್‌ಪಾತ್ ಮೇಲಿರುವ ದೇವರ ಫೋಟೋಗಳನ್ನು ತೆರವುಗೊಳಿಸಿ ಯೋಗ್ಯ ರೀತಿಯಲ್ಲಿ ಇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹಿಂದೂಪರ ಸಂಘಟನೆಗಳು “ದಿನವಾಣಿ” ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ.




