ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಅಂದಾಗ ಮಾತ್ರ ನ್ಯಾಯ ಸಿಗುತ್ತದೆ ಎಂದು ನಟಿ, ಬಿಜೆಪಿ ನಾಯಕಿ ಮಾಳವೀಕಾ ಅವಿನಾಶ್ ಹೇಳಿದ್ದಾರೆ.
ಬಿಡನಾಳದಲ್ಲಿನ ನೇಹಾ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವೇ ಬೆಚ್ಚಿ ಬಿಳಿಸುವಂತೆ ಕ್ರೂರವಾಗಿ ನೇಹಾಳ ಕೊಲೆ ಆಗಿದೆ. ಕಾಲೇಜು ಕ್ಯಾಂಪಸ್’ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಾ, ಹೀಗಾದರೇ ಪಾಲಕರು ಮಕ್ಕಳನ್ನು ಹೇಗೆ ಕಾಲೇಜಿಗೆ ಕಳುಹಿಸಲು ಧೈರ್ಯ ಮಾಡುತ್ತಾರೆ. ಈ ಪ್ರಕರಣವನ್ನೂ ಸಿಬಿಐಗೆ ಕೊಡಬೇಕು, ಸಿಬಿಐಗೆ ಕೊಟ್ರೆ ಮಾತ್ರ ನ್ಯಾಯ ಸಿಗುತ್ತೆ ಎಂದರು.
ರಾಜ್ಯ ಸರ್ಕಾರ ಈ ವಿಚಾರವನ್ನು ತಳ್ಳಿ ಹಾಕುವ ಕೆಲಸ ಮಾಡುತ್ತಿದೆ. ಓಲೈಕೆಗಾಗಿ ರಾಜ್ಯಸರ್ಕಾರ ಈ ರೀತಿ ಮಾಡುತ್ತಿದೆ. ಸಿಐಡಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ, ಗುರುವಾರ ನಡೆದ ಘಟನೆಗೆ ಮಂಗಳವಾರ ಸಿಎಂ ಮಾತನಾಡುತ್ತಾರೆ. ಅವರಿಗೆ ಅಷ್ಟು ಪುರುಸೊತ್ತು ಇಲ್ಲ, ಎಲ್ಲವನ್ನು ರಾಜಕೀಯವಾಗಿ ಮುಖ್ಯಮಂತ್ರಿಗಳು ನೋಡುತ್ತಾರೆ ಎಂದು ಹರಿಹಾಯ್ದರು.
ಸಾಮೂಹಿಕ ಸಮಾಜವಾಗಿ ನಾವೆಲ್ಲರೂ ನೇಹಾ ಕುಟುಂಬದವರಿಗೆ ಧೈರ್ಯ ನೀಡಬೇಕು. ಸಿಬಿಐ ತನಿಖೆ ಮಾಡಿದರೇ ಅತ್ಯಂತ ಕಠಿಣ ಶಿಕ್ಷೆ ಸಿಗುತ್ತೆ ಅನ್ನೋದು ನಮ್ಮ ನಂಬಿಕೆ. ಎಲ್ಲವೂ ಸುಧಿರ್ಘವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.