
ಹುಬ್ಬಳ್ಳಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ವಧಾಲಯಗಳು ಹಾಗೂ ಮಾಂಸದ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದರೂ, ನೆಲಮಟ್ಟದಲ್ಲಿ ಆ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ನಗರದ ಹಲವೆಡೆ ಅಂಗಡಿಗಳು ಬಾಗಿಲು ಅರ್ಧಕ್ಕೆ ತೆರೆದು ವ್ಯಾಪಾರ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ಪಶುವೈದ್ಯಾಧಿಕಾರಿಗಳು ಸ್ಪಷ್ಟ ಎಚ್ಚರಿಕೆ ನೀಡಿದ್ದರು ಅಂಗಡಿ ತೆರೆದರೆ ಲೈಸನ್ಸ್ ರದ್ದು, ಕಠಿಣ ಕ್ರಮ ಅನಿವಾರ್ಯ. ಆದರೆ ಆ ಎಚ್ಚರಿಕೆ ಕಾಗದದಲ್ಲೇ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮಹಾಶಿವರಾತ್ರಿ ಎಂಬ ಭಕ್ತಿಯ ದಿನದಲ್ಲೇ ನಿಯಮ ಉಲ್ಲಂಘನೆ ನಡೆದುಬರುತ್ತಿರುವುದು ಪಾಲಿಕೆಯ ಅನುಷ್ಠಾನದ ವೈಫಲ್ಯವನ್ನೇ ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಗರದ ಪ್ರಮುಖ ಭಾಗಗಳಲ್ಲಿ ಮಾಂಸದಂಗಡಿಗಳು ಸಾಮಾನ್ಯ ದಿನದಂತೆಯೇ ವ್ಯವಹಾರ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೆಲವೆಡೆ ಅಂಗಡಿಗಳು ಅರ್ಧ ಶಟರ್ ಇಳಿಸಿ ‘ರಹಸ್ಯ’ ವ್ಯಾಪಾರ ನಡೆಸುತ್ತಿರುವುದೂ ಗಮನಾರ್ಹ.
ಪಾಲಿಕೆ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ತಪಾಸಣೆ ನಡೆಸುತ್ತಾರೆಯೇ?
ಲೈಸನ್ಸ್ ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ?
ಅಥವಾ ಇದು ಮತ್ತೊಮ್ಮೆ ‘ಆದೇಶ ಹೊರಡಿಸಿ ಮೌನ’ ಎನ್ನುವ ಉದಾಹರಣೆಯಾಗಿ ಉಳಿಯುತ್ತದೆಯೇ?
ಸಾರ್ವಜನಿಕರ ಪ್ರಶ್ನೆಗೆ ಅಧಿಕಾರಿಗಳ ಕ್ರಮವೇ ಉತ್ತರ ನೀಡಬೇಕಿದೆ.




