ಹುಬ್ಬಳ್ಳಿ: ರಾಜ್ಯದಲ್ಲಿ ಗ್ಯಾರಂಟಿ ಘೋಷಣೆ ಬಳಿಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬ ಪರ-ವಿರೋಧದ ಚರ್ಚೆಯ ಮಧ್ಯ ಇದೀಗ ಸಣ್ಣ ಮೊತ್ತದ ಕಾಮಗಾರಗಳ ಹೆಸರಿನಲ್ಲಿ ದೊಡ್ಡ ಲೂಟಿಗೆ ರಹದಾರಿಯನ್ನು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, “ಗ್ರಾಪಂಗಳಲ್ಲಿ ಟೆಂಡರ್ ಇಲ್ಲದೇ ಕೋಟಿಗಟ್ಟಲೇ ಹಣ ಪೋಲಾಗುತ್ತಿದೆ”.
ಸರ್ಕಾರ ಸಾರ್ವಜನಿಕ ಸಂಗ್ರಹಣೆಯಲ್ಲಿನ ಕಾರ್ಯ ವಿಧಾನಗಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು “ಕರ್ನಾಟಕ ಪಾರದರ್ಶಕ ಕಾಯ್ದೆ” ಜಾರಿಗೆ ತಂದಿದೆ. ಆದರೂ ಸಹ ಗುತ್ತಿಗೆದಾರರು/ಎಜೆನ್ಸಿಗಳು ಟೆಂಡರ್ ಇಲ್ಲದೇ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ.
ನಿಯಮದಲ್ಲಿ ಒಂದು ಲಕ್ಷ ರೂ ಒಳಗಿನ ಕಾಮಗಾರಿಗೆ ಯಾವುದೇ ಟೆಂಡರ್ ಕರೆಯಬೇಕಿಲ್ಲ ಎಂಬುವದಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ತುಂಡು ಗುತ್ತಿಗೆ ಮಾದರಿಯಲ್ಲಿ ಏಜೆನ್ಸಿಗಳು ಗ್ರಾಮ ಪಂಚಾಯತಿಗಳನ್ನು ಕೊಳ್ಳೆ ಹೊಡೆಯುತ್ತಿದೆ.
ಉದಾಹರಣೆಗೆ ಸಣ್ಣ ಸಣ್ಣ ಮೊತ್ತದ ಕಾಮಗಾರಿ ಹೆಸರಿನಲ್ಲಿ ಅಂದರೆ ಜನಜಾಗೃತಿ, ಕಸ ಸಂಗ್ರಹ ವಾಹನ, ಡಸ್ಟ್ ಬಿನ್, ಗೋಡೆ ಬರಹಗಳು, ಡಿಜಿಟಲ್ ಲೈಬ್ರರಿಗೆ ಬೇಕಾದ ಮೋಡೆಮ್ ಹೀಗೆ ಹಲವು ರೀತಿಯಲ್ಲಿ ನೂರಾರು ಕೋಟಿ ರೂ ವಹಿವಾಟು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿ ವತಿಯಿಂದ ನಡೆಯುತ್ತಿದೆ.
ತುಂಡು ಗುತ್ತಿಗೆ/ಸಣ್ಣ ಮೊತ್ತದ ಕಾಮಗಾರಿ/ಉಪಕರಣ ಸಾಮಗ್ರಿಗಳನ್ನು ಖರೀದಿಗೆ ಕೊಡಿಸುವ ಏಜೆಂಟರು ಹುಟ್ಟಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕದಿದ್ದರೇ ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗದು.
ಮುಂದಿನ ದಿನಗಳಲ್ಲಿ ನಿಮ್ಮ ‘ದಿನವಾಣಿ’ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ದಾಖಲೆಗಳ ಸಮೇತ ಬಿಚ್ಚಿಡಲಿದೆ.