ಕುಂದಗೋಳ: 2023 ರ ವಿಧಾನಸಭೆ ಚುನಾವಣೆಗೆ ದಿನಗಣನೆಗಳು ಆರಂಭವಾಗಿದ್ದು, ಕುಂದಗೋಳ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಹೆಚ್ಚಾಗಿದೆ. ಕಾರಣ ಒಂದೆಡೆ ಯಡಿಯೂರಪ್ಪ ಸಂಬಂಧಿ ಸಿಎಸ್ ಚಿಕ್ಕನಗೌಡರ ಮತ್ತೊಮ್ಮೆ ಟಿಕೆಟ್ ಕೇಳಲು ಮುಂದಾಗುತ್ತಿದ್ದರೇ, ಮತ್ತೊಂದೆಡೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತ ಎಂ.ಆರ್. ಪಾಟೀಲ್ ಕೂಡಾ ಈ ಬಾರಿ ತಮಗೆ ಟಿಕೆಟ್ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದಾರೆ.
ಇನ್ನು 2013ರಲ್ಲಿ ಎಸ್.ಐ. ಚಿಕ್ಕನಗೌಡರ್ ಕೆಜೆಪಿ ಸೇರಿದ್ದಾಗ ಬಿಜೆಪಿಯಿಂದ ಎಂ.ಆರ್. ಪಾಟೀಲ್ ಸ್ಪರ್ಧೆ ಮಾಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಎಂ.ಆರ್. ಪಾಟೀಲ್ ಬೇಸರಗೊಂಡಿದ್ದರು. ಈ ಹಿನ್ನೆಲೆ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಎಮ್.ಆರ್.ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ? ಇಲ್ಲಾ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬ ಗೊಂದಲ ಕ್ಷೇತ್ರದ ಬಿಜೆಪಿ ವಲಯದಲ್ಲಿ ಸೃಷ್ಟಿ ಆಗಿದೆ.
ಆದರೆ ಕ್ಷೇತ್ರದಲ್ಲಿ ಜನರು ಮಾತನಾಡಿಕೊಳ್ಳುವ ರೀತಿಯಲ್ಲಿ ಹೇಳುವುದಾದರೆ ಎಮ್.ಆರ್.ಪಾಟೀಲ ಓರ್ವ ಕೆಲಸಗಾರ. ಈಗಾಗಲೇ ಕ್ಷೇತ್ರದ ಜನರೊಂದಿಗೆ ನಿಟಕ ಸಂಪರ್ಕ ಹೊಂದಿದ್ದಾರೆ. ದಿನನಿತ್ಯ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಜನರ ಕಷ್ಟಗಳಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಕುಂದಗೋಳ ಮತಕ್ಷೇತ್ರದ ಟಿಕೆಟ್ ಎಮ್.ಆರ್.ಪಾಟೀಲ್ ಅವರಿಗೆ ಸಿಕ್ಕಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ಹೇಳಲಾಗುತ್ತಿದೆ.
ಈ ದಿಸೆಯಲ್ಲಿ ಬಿಜೆಪಿ ಹೈಕಮಾಂಡ್ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.