ಏಪ್ರಿಲ್ 08 ರಿಂದ ಕೊಟಗೊಂಡಹುಣಸಿ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ…!!
ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಏ.08 ರಿಂದ ಏ.12 ರವರೆಗೆ ಜರುಗಲಿದೆ.
ಏ. 08 ರಿಂದ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಪ್ತು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ ಚಾಲನೆ ನೀಡಲಿದ್ದು, ಅದರಗುಂಚಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಜ್ಯೋತಿ ಬೆಳಗುವರು, ಶಾಸಕಿ ಕುಸುಮಾವತಿ ಶಿವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರತಿದಿನ ಶ್ರೀ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಮಹಾಮಂಗಳಾರತಿ ಹಾಗೂ ಸಂಜೆ 7:30 ರಿಂದ ಧರ್ಮ ಸಭೆ ನಡೆಯಲಿದ್ದು, ಉಪದೇಶವನ್ನು ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನರಗುಂದದ ಪಂಚಗ್ರಹ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಒಂದೊಂದು ದಿನ ಪ್ರವಚನ ನೀಡಲಿದ್ದಾರೆ.
ಏ.11 ರಂದು ಬೆಳ್ಳಿಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಗ್ರಾಮದಲ್ಲಿನ ಸಕಲ ದೇವಾನುದೇವತೆಗಳಿಗೆ ಮಹಾಪೂಜೆ ನಡೆಯಲಿದೆ. ನಂತರ ರಂಗೋಲಿ ಸ್ಪರ್ಧೆ, ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಂಜೆ 5:15 ಕ್ಕೆ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಮಹಾ ರಥೋತ್ಸವ ಜರುಗಲಿದೆ. ಏ.12 ರಂದು ಸಂಜೆ ಕಡುಬಿನ ಕಾಳಗ ಜರುಗಲಿದೆ.
ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ: ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಸಣ್ಣ ಮನಸು ದೊಡ್ಡ ಕನಸು ಗೆಳೆಯರ ಬಳಗ (ಮೈಲಾರಲಿಂಗೇಶ್ವರ ಯುವ ಭಜನಾ ಸಂಘ) ದಿಂದ ಏ.11 ರಂದು ರಾತ್ರಿ 9 ಕ್ಕೆ ಗಾನಗಂಧರ್ವ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಅಥಣಿ ತಾಲೂಕಿನ ಕಿರಣಗಿ ಗ್ರಾಮದ ಪ್ರಭಾವತಿ ರಕ್ಕನ್ನವರ ನೇತೃತ್ವದ ಪ್ರಭಾವತಿ ಭಜನಾ ಮಂಡಳಿ ಹಾಗೂ ಶೆರೆವಾಡದ ಸಿದ್ದಲಿಂಗೇಶ ಹಾರೋಗೇರಿ ನೇತೃತ್ವದ ಶ್ರೀ ಬಸವೇಶ್ವರ ಭಜನಾ ಸಂಘದ ನಡುವೆ ತತ್ವದ ಭಾರಿ ಭಜನಾ ಸ್ಪರ್ಧೆ ಜರುಗಲಿದೆ. ಏ.12 ರಂದು ಸಂಜೆ 7:30 ರಿಂದ ಪುಟ್ಟ ಮಣಿ ನಾಟ್ಯ ಸಂಘ ಹುಬ್ಬಳ್ಳಿ ವತಿಯಿಂದ ಮಿಸ್ಟರ್ ಗುಂಡು ರಾವ್ ಹಾಸ್ಯ ಪ್ರಧಾನ ಕೌಟುಂಬಿಕ ನಾಟಕ ಪ್ರದರ್ಶನವಾಗಲಿದೆ.