
ಹುಬ್ಬಳ್ಳಿ: ಜನ್ಮದಿನದ ಸಂಭ್ರಮದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಓರ್ವನಿಗೆ ಚಾಕು ಇರಿದ ಘಟನೆ ಶನಿವಾರ ತಡರಾತ್ರಿ ನವನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಜೇಬಿ ಉಲ್ಲಾ ಬಳ್ಳಾರಿ (35) ಎಂಬಾತನೇ ಚಾಕು ಇರಿತಕ್ಕೆ ಒಳಗಾದವನಾಗಿದ್ದು, ಸಿರಾಜ್ (44) ಚಾಕು ಹಾಕಿದವನಾಗಿದ್ದಾನೆ. ಗಾಯಗೊಂಡವನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಪಿಎಂಸಿ ನವನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಆ ಬಳಿಕ ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ ಭೇಟಿ ನೀಡಿ ಗಾಯಗೊಂಡ ಜೇಬಿ ಬಳ್ಳಾರಿಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಆರೋಪಿ ಬಂಧನ: ಘಟನೆ ನಡೆದ ಮಾಹಿತಿ ಸಿಗುತ್ತಿದ್ದಂತೆಯೇ ಎಪಿಎಂಸಿ ನವನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೆಮಿವುಲ್ಲಾ ನೇತೃತ್ವದ ತಂಡ ಹಿರಿಯ ಅಧಿಕಾರಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಚಾಕು ಇರಿದ ಆರೋಪಿಯನ್ನು ಘಟನೆ ನಡೆದ ಕೆಲವೇ ಘಂಟೆಯಲ್ಲಿ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.