ಧಾರವಾಡ : ಪೊಲೀಸ್ ಇಲಾಖೆಯಲ್ಲಿ ಒಳ್ಳೆ ಹೆಸರುಗಳಿಸಿ, ಡಿ. ವೈ.ಎಸ್ಪಿ ಆಗಿ ಕಾರ್ಯನಿರ್ವಹಿಸಿ, ಸೇವೆಯಿಂದ ನಿವೃತ್ತಿ ಹೊಂದಿದ್ದ ಹಿರಿಯ ಪೊಲೀಸ್ ಅಧಿಕಾರಿ ಕೃಷ್ಣಮೂರ್ತಿ ಹೊಸಕೋಟಿ (ಕಿಟ್ಟು)ನಿನ್ನೆ ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿ ಕೊಂಡಿದ್ದ ಕೃಷ್ಣಮೂರ್ತಿ ಹೊಸಕೋಟಿ ಅವರು, ಬೆಂಗಳೂರು, ಕೋಲಾರ ಚಿತ್ರದುರ್ಗ, ಹುಬ್ಬಳ್ಳಿ,ಬೆಳಗಾವಿ ಗದಗ,ಬಾಗಲಕೋಟೆ, ದಾವಣಗೆರೆ ಹಾಗೂ ಗುಪ್ತದಳ ಕೇಂದ್ರ ಕಚೇರಿ ಹೀಗೆ ಹತ್ತು ಹಲವು ಕಡೆಗಳಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದರು.
ಸುಮಾರು 30 ವರ್ಷಗಳ ತಮ್ಮ ಸುದೀರ್ಘ ಪೊಲೀಸ್ ಇಲಾಖಾ ಸೇವಾವಧಿಯಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
2013 ರಲ್ಲಿ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಡೆಯುತ್ತಿದ್ದ ಕಬ್ಬಿನದ ಅದಿರು ಮೈನಿಂಗ ಸಾಗಾಟ ಹುಬ್ಬಳ್ಳಿ ಮೂಲಕ ಗೋವಾಗೆ ಲಾರಿಗಳ ಮೂಲಕ ತೆರಳುತ್ತಿತ್ತು. ಈ ಸಂಚಾರಿ ಜನದಟ್ಟನೆಯನ್ನು ನಿಭಾಯಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿತ್ತು.ಆಗ ಹುಬ್ಬಳ್ಳಿ ಸಂಚಾರಿ ಪೊಲೀಸ್ ಅಧಿಕಾರಿಯಾಗಿದ್ದ ಇವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ ಹಗರಿ ಬೊಮ್ಮನಹಳ್ಳಿಯಲ್ಲಿ ಸಿಂಗಟಾಲೂರ ಏತ್ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ರೈತರು ಮತ್ತು ಸರ್ಕಾರದ ಮದ್ಯೆ ಸಮನ್ವಯ ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ನಿವೃತ್ತಿಯ ಬಳಿಕ ಆರೋಗ್ಯ, ಶಿಕ್ಷಣ, ಧಾರ್ಮಿಕ ಮತ್ತಿತರ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಹೊಸಕೋಟಿ ಅವರು ಹತ್ತು ಹಲವು ಸೇವಾ, ಧಾರ್ಮಿಕ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಅವರ ಪಾರ್ಥಿವ ಶರೀರ ಹುಟ್ಟುರಾದ ಮುಧೋಳಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ದೃಶ್ಯ ಕಂಡು ಅವರ ಪೊಲೀಸ್ ಇಲಾಖೆಯ ಸಹಪಾಠಿಗಳು ಹಾಗೂ ಅಭಿಮಾನಿಗಳು ಗಳ ಗಳನೆ ಅತ್ತರು.
ಇನ್ನು ಕೃಷ್ಣ ಮೂರ್ತಿ ಅವರ ಅಂತ್ಯ ಕ್ರಿಯೆಯನ್ನು ರೆಡ್ಡಿ ಸಮುದಾಯದ ಧಾರ್ಮಿಕ ವಿಧಿ ವಿಧಾನ ಮೂಲಕ ಮುಧೋಳಿನ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ್, ಸಹಾಯಕ ಪೊಲೀಸ್ ಆಯುಕ್ತ ನಾರಾಯಣ ಬರಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮೃತ ಹೊಸಕೋಟಿ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಚ್. ಕೆ. ಪಾಟೀಲ್, ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ಅನೇಕ ಮುಖಂಡರು ಕಂಬನಿ ಮಿಡಿದಿದ್ದಾರೆ.