ಹಳಿಯಾಳದಲ್ಲಿ ಭರ್ಜರಿಯಾಗಿ ನಡೆದ ಅಂತರಾಷ್ಟ್ರೀಯ ಜಂಗಿ ಕುಸ್ತಿ

ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಭಾನುವಾರ ಅಂತರಾಷ್ಟ್ರೀಯ ಮಟ್ಟದ ಜಂಗಿ ಕುಸ್ತಿ ಪಂದ್ಯಾವಳಿ ಭರ್ಜರಿಯಾಗಿ ನಡೆಯಿತು.
ಮಾಜಿ ಸೈನಿಕ ಹಾಗೂ ಸ್ನೇಹಜೀವಿ ರಾಜು ಮಾರುತಿ ಪೇಜೋಳ್ಳಿಯವರ ನೇತೃತ್ವದಲ್ಲಿ, ರಾಜು ಪೇಜೋಳ್ಳಿ ಜನಸ್ನೇಹಿ ಬಳಗದ ಆಯೋಜನೆಯಲ್ಲಿ ನಡೆದ ಈ ಕುಸ್ತಿ ಹಬ್ಬ ತಡರಾತ್ರಿ ವರೆಗೆ ಮುಂದುವರಿದು ಸಾವಿರಾರು ಕುಸ್ತಿ ಪ್ರೇಮಿಗಳನ್ನು ಸೆಳೆದಿತು.
ಹಳಿಯಾಳದ ಎಪಿಎಂಸಿ ಎದುರಿನ ಖಾಸಗಿ 8 ಎಕರೆ ಜಮೀನಿನಲ್ಲಿ ನಡೆದ ಪಂದ್ಯಾವಳಿಗೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಕುಸ್ತಿ ಪಟುಗಳು ಭಾಗವಹಿಸಿದ್ದರು. ಅಚ್ಚುಕಟ್ಟಾದ ವ್ಯವಸ್ಥೆ, ಶಿಸ್ತಿನ ಆಯೋಜನೆ ಮತ್ತು ಭರ್ಜರಿ ಬಹುಮಾನಗಳು ಈ ಕುಸ್ತಿ ಹಬ್ಬದ ವಿಶೇಷವಾಗಿದ್ದವು.
ಪಂದ್ಯಾವಳಿಯನ್ನು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾಜಿ ಸೈನಿಕ ರಾಜು ಪೇಜೋಳ್ಳಿಯವರ ಕ್ರೀಡಾ ಪ್ರೇಮ ಹಾಗೂ ಸಂಘಟನಾ ಸಾಮರ್ಥ್ಯವನ್ನು ಶ್ಲಾಘಿಸಿ, ಮೊಬೈಲ್ ಯುಗದಲ್ಲಿ ಮಂಕಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಇಂತಹ ಕುಸ್ತಿ ಹಬ್ಬಗಳು ಹೊಸ ಜೀವ ತುಂಬುತ್ತಿವೆ ಎಂದರು. ಮುಂದಿನ ದಿನಗಳಲ್ಲೂ ಇಂತಹ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕು, ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.
ಪ್ರಮುಖ ಕುಸ್ತಿ ಸ್ಪರ್ಧೆಯಲ್ಲಿ ಮಹಿಂದ್ರಾ ಥಾರ್ ಬಹುಮಾನಕ್ಕಾಗಿ ಹೆಸರಾಂತ ಕುಸ್ತಿ ಪಟುಗಳಾದ ಶಿಕಂಧರ್ ಶೇಖ್ ಮತ್ತು ಪೃಥ್ವಿರಾಜ್ ಪಾಟೀಲ್ ನಡುವೆ ನಡೆದ ರೋಚಕ ಹೋರಾಟದಲ್ಲಿ ಶಿಕಂಧರ್ ಶೇಖ್ ವಿಜಯಶಾಲಿಯಾದರು. ದ್ವಿತೀಯ ಬಹುಮಾನ ರೈತ ಮಿತ್ರ ಟ್ರ್ಯಾಕ್ಟರ್‌ಗಾಗಿ ನಡೆದ ಪೈಪೋಟಿಯಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಟು ಮಿರ್ಜಾ ಇರಾನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಮಹಿಳಾ ವಿಭಾಗದಲ್ಲಿ ನಂಬರ್ ಒನ್ ಕುಸ್ತಿ ಪಟ್ಟು ಸೋನಾಲಿ ಮಡಲಿ ಗೆದ್ದುಕೊಂಡರು. ಬುಲೆಟ್, ಸ್ಪ್ಲೆಂಡರ್ ಹಾಗೂ ಸ್ಕೂಟಿ ಸೇರಿದಂತೆ ಹಲವು ವಾಹನಗಳನ್ನು ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನವಾಗಿ ವಿತರಿಸಲಾಯಿತು.
ಗ್ರಾಮೀಣ ಕ್ರೀಡೆ, ಶಿಸ್ತು ಮತ್ತು ಸಂಸ್ಕೃತಿಯ ಸಂಯೋಜನೆಯಾದ ಈ ಅಂತರಾಷ್ಟ್ರೀಯ ಜಂಗಿ ಕುಸ್ತಿ ಹಳಿಯಾಳಕ್ಕೆ ಹೊಸ ಕ್ರೀಡಾ ಗೌರವ ತಂದುಕೊಟ್ಟಿತು.




