ಯಲ್ಲಾಪುರ ಕಾಳಮ್ಮನಗರದಲ್ಲಿ ಕೊಲೆ ಪ್ರಕರಣ: ಮಹಿಳೆ ಹತ್ಯೆ, ಆರೋಪಿತ ಪರಾರಿ
ಉತ್ತರ ಕನ್ನಡ. ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆ ಭೀಕರ ಕೊಲೆ ನಡೆದಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬರನ್ನು ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ.
ಮೃತ ಮಹಿಳೆಯನ್ನು ರಂಜಿತಾ (31) ಎಂದು ಗುರುತಿಸಲಾಗಿದ್ದು, ಆರೋಪಿತ ವ್ಯಕ್ತಿ ರಫಿಕ್ ಎಂಬಾತನಾಗಿದ್ದಾನೆ. ಕೊಲೆ ನಡೆಸಿದ ಬಳಿಕ ರಫಿಕ್ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಂಜಿತಾ ಮದುವೆಯಾಗಿ ಕೆಲ ವರ್ಷಗಳಿಂದ ಗಂಡನಿಂದ ದೂರವಿದ್ದು, ಯಲ್ಲಾಪುರ ಮೂಲದ ರಫಿಕ್ ಜೊತೆ ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತಿದ್ದವು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯ ದಿನ ಕಾಳಮ್ಮನಗರದಲ್ಲಿರುವ ವಾಸಸ್ಥಳದಲ್ಲಿ ರಂಜಿತಾ ಮತ್ತು ರಫಿಕ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಸಂದರ್ಭದಲ್ಲಿ ರಫಿಕ್ ಚಾಕುವಿನಿಂದ ಕುತ್ತಿಗೆಗೆ ಇರಿದು ರಂಜಿತಾಳನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ರಂಜಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ ಶಶಿಕಾಂತ್ ಕೊರವರ




