ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ ಭೂಮಿಯನ್ನು, ಭೂಮಿ ಮಾಲೀಕರು ಸತ್ತು ಸ್ವರ್ಗದಲ್ಲಿದ್ದರೂ ಸಹ ಅವರ ಹೆಸರಿನಲ್ಲಿ ಬೇರೆಯವರನ್ನು ಕರೆಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿದಲ್ಲದೇ, ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಮಾರಾಟ ಮಾಡಿರುವ ಕುರಿತಂತೆ ಈಗಾಗಲೇ ನಿಮ್ಮ “ದಿನವಾಣಿ” ದಾಖಲೆಗಳ ಸಮೇತವಾಗಿ ಸುದ್ದಿ ಬಿತ್ತರ ಮಾಡಿ ಸಂಬಂಧಪಟ್ಟ ಹುಡಾ ಅಧ್ಯಕ್ಷರು ಹಾಗೂ ಆಯುಕ್ತರು, ಮತ್ತು ಸಬ್ ರಿಜಿಸ್ಟರ್ ಕಚೇರಿಯ ಉಪ ನೊಂದಣಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡಾ ಆಯುಕ್ತರು ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿಯನ್ನು ನೊಂದಣಿ ಮಾಡಿಕೊಂಡಿರುವ ಕುರಿತು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ವೇಳೆ ತಮ್ಮ ಸಹಿಯನ್ನು ನಕಲು ಮಾಡಲಾಗಿದೆ. ಅಷ್ಟೇ ಅಲ್ಲದೇ ಕಚೇರಿಯ ಸೀಲ್ ಕೂಡಾ ನಕಲು ಮಾಡಲಾಗಿದೆ. ಇದರಲ್ಲಿ ಕಚೇರಿಯ ಕೆಳಹಂತದ ಸಿಬ್ಬಂದಿಗಳ ಕೈವಾಡದ ಶಂಕೆಯನ್ನು ವ್ಯಕ್ತಪಡಿಸಿದ್ದರು.
ಬಳಿಕ ಪ್ರಕರಣವನ್ನು ದಾಖಲಿಸಿಕೊಂಡಿರುವ ಉಪನಗರ ಠಾಣೆಯ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧನ ಮಾಡುವಲ್ಲಿ ಮುಂದಾಗಿದ್ದರು. ಪೊಲೀಸ್ ಆಯುಕ್ತರು ಕೂಡಾ ಆರೋಪಿಗಳ ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣ ದಾಖಲಾಗಿ ತಿಂಗಳುಗಳು ಕಳೆಯುತ್ತಾ ಬಂದರು ಸಹ ಪ್ರಕರಣ ತನಿಖೆ ಮಾತ್ರ ತನಿಖಾ ಹಂತದಲ್ಲಿಯೇ ಇದ್ದು, ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಮುಖ್ಯ ಆರೋಪಿ ಜೊತೆಗೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿ, ಒಂದು ಕಂಪ್ಯೂಟರ್ ಶಾಪ್ ಸೀಜ್ ಮಾಡಿ, ಒಂದು ಕಾರು ವಶಕ್ಕೆ ಪಡೆದಿದ್ದಾರೆ. ಆದರೆ ಸಬ್ ರಿಜಿಸ್ಟರ್ ಕಚೇರಿಗೆ ಬಂದು ತಾನೇ ಶಾಂತಾ ಕೊಂ ಮಲ್ಲಪ್ಪ ಪಟ್ಟಣಶೆಟ್ಟಿ ಎಂದು ಬಿಂಬಿಸಿಕೊಂಡು ಉಪನೊಂದಣಿ ಅಧಿಕಾರಿಗಳ ಕಣ್ಣಿಗೆ ಮಂಕುಬೂದಿ ಎರಚಿದ ಮಹಿಳೆಯನ್ನು ಪೊಲೀಸರು ಬಂಧನ ಮಾಡಿದ್ರಾ? ಹಾಗಿದ್ರೆ ಆಕೆ ಎಲ್ಲಿದ್ದಾಳೆ? ಪ್ರಕರಣ ಯಾವ ದಿಕ್ಕಿನಲ್ಲಿ ನಡೆದಿದೆ? ನಿಜವಾಗಿಯೂ ಆರೋಪಿಗಳಿಗೆ ಶಿಕ್ಷೆ ಆಗುತ್ತಾ? ಹುಡಾ ಅಧ್ಯಕ್ಷರು, ಆಯುಕ್ತರ ಕಾರ್ಯವೈಖರಿ ಹೇಗಿದೆ? ಎಂಬ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ನಿಮ್ಮ ದಿನವಾಣಿ ಹೊರ ಹಾಕಲಿದೆ ನಿರೀಕ್ಷಿಸಿ….