
ಮುಂಡಗೋಡ: ಹಿಂದೂ ಧರ್ಮವು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ಎಲ್ಲಾ ಧರ್ಮಗಳಿಗೆ ಮೂಲ ಧರ್ಮವಾಗಿದೆ ಎಂದು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ವಸಂತ ಗಿಳಿಯಾರ ಹೇಳಿದರು.
ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಮುಂಡಗೋಡ ವತಿಯಿಂದ ನಡೆದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿ, ಪ್ರಾರಂಭದಲ್ಲಿ ಜಗತ್ತಿನಲ್ಲಿ ಒಂದೇ ಧರ್ಮ ಇದ್ದದ್ದು, ಅದು ಹಿಂದೂ ಧರ್ಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹಿಂದೂ ಧರ್ಮವು ಸಹಿಷ್ಣುತೆಯುಳ್ಳ ಜಗತ್ತಿನ ಏಕೈಕ ಧರ್ಮವಾಗಿದೆ. ಹಿಂದೂ ದೇವಸ್ಥಾನಗಳಲ್ಲಿ ಇರುವ ಪ್ರತಿಮೆಗಳು ಕೇವಲ ವಿಗ್ರಹಗಳಲ್ಲ, ಅವು ಹಿಂದೂ ಧರ್ಮದ ಸಂಕೇತಗಳಾಗಿವೆ ಎಂದರು.
ಜಗತ್ತಿನ ಬೇರೆ ಬೇರೆ ಧರ್ಮಗಳು ಹೆಣ್ಣನ್ನು ಕತ್ತಲೆಯ ಕೂಪಗಳಲ್ಲಿ ಇರುವಂತೆ, ಹೆಣ್ಣಿನ ಮುಖದ ಮೇಲೆ ಸೂರ್ಯನ ಕಿರಣಗಳನ್ನು ಬಿಳದಂತಹ ನೀಚ ಆಚರಣೆ ಪಾಲಿಸುತ್ತಿರುವಾಗ, ಮಣ್ಣನ್ನೇ ಮಾತೆಯೆಂದು ಪೂಜಿಸಿದ ಸಂಸ್ಕೃತಿ ಹಿಂದೂ ಧರ್ಮದಲ್ಲಿದೆ. ವಿವಿಧ ದೇಶಗಳಿಂದ ಬಂದವರಿಗೆ ಭಾರತ ಆಶ್ರಯ ನೀಡಿದ್ದು, ಭಾರತ ಎಲ್ಲರಿಗೂ ಆಶ್ರಯಭೂಮಿಯಾಗಿದೆ ಎಂದರು.
ಮನೆಮನೆಗಳಲ್ಲಿ ಸಂಸ್ಕಾರದ ರಂಗೋಲಿ, ಭಜನೆಗಳ ಮೂಲಕ ಹಿಂದೂ ಧರ್ಮವನ್ನು ಜೀವಂತವಾಗಿಡಬೇಕು. ಭಜನೆ ಇರುವಲ್ಲಿ ವಿಭಜನೆ ಇರುವುದಿಲ್ಲ ಎಂದರು.
ಹಿಂದೂ ಧರ್ಮದ ತೆಗಳಿಕೆಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಜಾಗೃತರಾಗಬೇಕು. ಹಿಂದೂಗಳು ಹಿಂಸಾತ್ಮಕರಲ್ಲ, ಸಾಮರಸ್ಯದೊಂದಿಗೆ ಬದುಕುವವರಾಗಿದ್ದಾರೆ ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿ ಶ್ರೀಧರ ಹಿರೇಹದ್ದ
ಸ್ವದೇಶಿ ಭಾವನೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಸ್ವದೇಶಿ ಸಂಪನ್ಮೂಲಗಳನ್ನು ಬೆಳೆಸಬೇಕು ಎಂದು ಹೇಳಿದರು. ಖರೀದಿ–ಬಳಕೆಯ ಅತಿರೇಕ ಸಂಸ್ಕೃತಿಯನ್ನು ತ್ಯಜಿಸಿ, ವಿದೇಶಿ ವಸ್ತುಗಳನ್ನು ಬಿಟ್ಟು ಸ್ವದೇಶಿ ಉತ್ಪನ್ನಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸಬೇಕೆಂದು ಅವರು ಕರೆ ನೀಡಿದರು.
ನಾಗರಿಕ ಕರ್ತವ್ಯ ಎಂದರೆ ಶಿಸ್ತು, ಶಿಷ್ಟಾಚಾರ ಹಾಗೂ ನಿಯಮಗಳ ಪಾಲನೆ ಎಂದು ತಿಳಿಸಿದ ಅವರು, ನಾವು ಅವುಗಳನ್ನು ಮರೆತಿರುವ ಸ್ಥಿತಿಯಿಂದ ಹೊರಬಂದು ಕಡ್ಡಾಯವಾಗಿ ಪಾಲಿಸುವ ಮನೋಭಾವ ಬೆಳೆಸಬೇಕು.
ಹಿಂದುತ್ವವೆಂದರೆ ಸಮಾಜದ ಎಲ್ಲ ಉನ್ನತ ಮೌಲ್ಯಗಳು, ಕರ್ತವ್ಯಗಳು ಹಾಗೂ ಶಿಸ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಶ್ರೀ ವೇದಮೂರ್ತಿ ಪಂಡಿತ ರುದ್ರಮುನಿ ಸ್ವಾಮಿಗಳು ಮಾತನಾಡಿ ಹಿಂದೂಗಳು ಕೋಗಿಲೆಯ ಸ್ವರೂಪಿಗಳು ಕಾಗೆಯ ಸಹವಾಸ ಮಾಡಿದರೆ ಹಿಂದುತ್ವಕ್ಕೆ ಧಕ್ಕೆಯಾದಿತು ಎಂದು ಅಭಿಪ್ರಾಯಪಟ್ಟರು. ಹಿಂದೂ ಧರ್ಮವು ಎಲ್ಲರಿಗೂ ಹೆಮ್ಮರವಿದ್ದಂತೆ. ಎಲ್ಲರಿಗೂ ನೆರಳು, ಫಲ ಕೊಡುವ ಮೂಲಕ ಅವರಿವರೆನ್ನದೆ ಒಟ್ಟಾಗಿ ಕಾಣುವ ಸಂಘ ಸಂಸ್ಥೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣ ಪ್ರಾಂತ ಮಹಿಳಾ ಕಾರ್ಯದರ್ಶಿ ಸುರೇಖಾ ಗಾಯತೊಂಡೆ, ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ತಂಗಮ್ ಚಿನ್ನನ್ ತೇವರ, ಶಂಕರ ಲಮಾಣಿ, ಮಂಜುನಾಥ ಎಚ್.ಪಿ, ಪ್ರಕಾಶ ಬಡಿಗೇರ, ಸುರೇಶ ಕಲ್ಲೋಳ್ಳಿ, ಹರೀಶ ಪೂಜಾರಿ, ಅಶೋಕ ಚಲವಾದಿ, ಶಿವು ಕೊರವರ ಕಿರಣ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.




