ಹುಬ್ಬಳ್ಳಿ: ತಾಲೂಕಿನ ಹಳ್ಳಿಯೊಂದರಲ್ಲಿ ರಾಜಕಾಲುವೆ ಮೇಲೆ ಗೂಡೌನ್ (ಗೋದಾಮು) ನಿರ್ಮಿಸಲು ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಪರವಾನಗಿ ನೀಡಿ, “ಕೈ”ಬೆಚ್ಚಗೆ ಮಾಡಿಕೊಂಡಿದ್ದಾರೆಂಬ ಸದ್ದು ಜೋರಾಗಿದೆ.
ಹುಬ್ಬಳ್ಳಿ – ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಿಂಗ್ ರೋಡ್ ಹತ್ತಿರ ಈ ಗುಸುಗುಸು ಮಾತುಗಳು ಕೇಳಿಬರುತ್ತಿದ್ದು, ಗ್ರಾಪಂನಲ್ಲಿ ಜನರು ಸಣ್ಣ ಕೆಲಸ ಹೇಳಿಕೊಂಡು ಹೋದರು ದಾಖಲೆಗಳ ಕುಂಟು ನೆಪದಲ್ಲಿ ಅಲೆದಾಡಿಸುವ ಈ ಅಧಿಕಾರಿ ಯಾವ ದಾಖಲೆಗಳನ್ನು ನೋಡಿ ರಾಜಕಾಲುವೆ ಮೇಲೆ ಗೋದಾಮು ನಿರ್ಮಿಸಲು ಅನುಮತಿ ಕೊಟ್ಟಿದ್ದಾರೆಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಈಗಾಗಲೇ ಈ ಅಧಿಕಾರಿ ಗ್ರಾಮದಲ್ಲಿ ಜನರ ವಿರೋಧವಿದ್ದರೂ ಸಹ ಫ್ಯಾಕ್ಟರಿ ಒಂದಕ್ಕೆ ಅನುಮತಿ ನೀಡಿ ಜನರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಲೇಔಟ್ ನಿರ್ಮಿಸುವ ಡೆವಲಪರ್’ಗಳಿಗಂತು ಇವರು ಸಾಕಾಗಿ ಹೋಗಿದ್ದಾರಂತೆ.
ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಚಿಂತನೆ ಮಾಡಬೇಕಾದ ಈ ಅಭಿವೃದ್ಧಿ ಅಧಿಕಾರಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ವ್ಯಾಖ್ಯೆಯನ್ನು ಮರೆತು, ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ರಾಜಕಾಲುವೆ ನಿರ್ಮಿಸಲು ಅನುಮತಿ ನೀಡಿದ್ದು ಸಹಜವಾಗಿಯೇ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜನರು ರೊಚ್ಚಿಗೆದ್ದು ಅಧಿಕಾರಿ ಮೇಲೆ ಮುಗಿಬೀಳುವ ಮೊದಲೇ ಮೇಲಾಧಿಕಾರಿಗಳು ಈತನ ನಡೆಯನ್ನು ಗಮನಿಸಿ ಬುದ್ದಿ ಹೇಳುವ ಕೆಲಸ ಮಾಡಬೇಕಿದೆ.
ಈ ಗ್ರಾಪಂ ಅಭಿವೃದ್ಧಿ ಅಧಿಕಾರಿ ತಮ್ಮ ಸ್ಥಾನದ ಜವಾಬ್ದಾರಿ ಅರಿತು ನಡೆದುಕೊಳ್ಳದೇ ಹೋದಲ್ಲಿ ನಿಮ್ಮ ದಿನವಾಣಿ ಮುಂದಿನ ದಿನಗಳಲ್ಲಿ ದಾಖಲೆಗಳ ಸಮೇತವಾಗಿ ಅಧಿಕಾರಿಯ ಮುಖವನ್ನು ಬಹಿರಂಗಪಡಿಸಲಿದೆ.