
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಜೋಡಿ ದೇವಿಯರ ಜಾತ್ರಾ ಮಹೋತ್ಸವಕ್ಕೆ ಈಗ ಜೂಜಾಟದ ಕಪ್ಪು ಚುಕ್ಕೆ ಅಂಟಿಕೊಂಡಿದೆ. ಜಾತ್ರೆಯ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯ ಯುವಕರು ಪೊಲೀಸ್ ಮೆಟ್ಟಿಲೇರಿದ್ದಾರೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಅಮಾಯಕರು ಜೂಜಾಟದ ಬಲೆಗೆ ಬಿದ್ದು ಹಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಯಲ್ಲಾಪುರದ ಯುವಕರ ತಂಡವೊಂದು ಜಾಗೃತಿ ಮೂಡಿಸುತ್ತಿದೆ.
ಫೆಬ್ರವರಿ 13ರಂದು ರಾತ್ರಿ ಈ ವಿಷಯವಾಗಿ ಜೂಜಾಟ ನಡೆಸುವವರು ಮತ್ತು ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ.
ಪಟ್ಟಣದ ಮುಂಡಗೋಡು ರಸ್ತೆಯ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳಲ್ಲಿ ನಿಷೇಧಿತ ಜೂಜಾಟಗಳಾದ ರಿಂಗ್ ಎಸೆಯುವುದು ಮತ್ತು ಬಣ್ಣದ ಬಾಲ್ ಎಸೆಯುವ ಆಟಗಳನ್ನು ಆಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಾತ್ರೆಯಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲದಿದ್ದರೂ, ವ್ಯವಸ್ಥಿತವಾಗಿ ಜೂಜಾಟದ ಜಾಲ ಸಕ್ರಿಯವಾಗಿದೆ ಎಂದು ಯುವಕರು ದೂರಿದ್ದಾರೆ.
ಜೂಜಾಟವನ್ನು ತಡೆಯಲು ಮುಂದಾದ ಯುವಕರಿಗೆ, ಈ ಅಕ್ರಮ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಏರುಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮುಂಡಗೋಡ ರಸ್ತೆ ಮತ್ತು ರವೀಂದ್ರ ನಗರದ ಹತ್ತಾರು ಯುವಕರು ಫೆಬ್ರವರಿ 14ರಂದು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೂಡಲೇ ಈ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
“ಅಮಾಯಕರು ತಮ್ಮ ಕಷ್ಟದ ಹಣವನ್ನು ಜೂಜಿನಲ್ಲಿ ಕಳೆದುಕೊಳ್ಳಬಾರದು ಎಂಬುದು ನಮ್ಮ ಆಶಯ. ಪೊಲೀಸರು ಕೂಡಲೇ ಕ್ರಮ ಕೈಗೊಂಡು ಜಾತ್ರೆಯ ಪಾವಿತ್ರ್ಯತೆಯನ್ನು ಉಳಿಸಬೇಕು ಎಂಬುದು ಸ್ಥಳೀಯ ಯುವಕರ ಆಗ್ರಹ.
ವರದಿ: ವೆಂಕಟೇಶ ದಾಸರ




