
ಮುಂಡಗೋಡ: ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ಜಾತ್ರೆಯ ಪವಿತ್ರ ‘ಹೊರಬೀಡು’ ಆಚರಣೆ ನಡೆಯುತ್ತಿದ್ದ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡ ಕಳ್ಳರು, ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಮಂಗಳವಾರ ಪಟ್ಟಣದಲ್ಲಿ ಸಂಭವಿಸಿದೆ. ದೇವಿಯ ನಂಬಿಕೆಯ ನಡುವೆ ನಡೆದ ಈ ಕೃತ್ಯ ಸಾರ್ವಜನಿಕರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಕಳ್ಳರ ಕೈಚಳಕದ exclusive video👇👇👇
https://www.facebook.com/share/r/18zjDTnuAb/
ಗ್ರಾಮದೇವಿ ಜಾತ್ರೆಯ ಕೊನೆಯ ದಿನದ ಅಂಗವಾಗಿ ಮಂಗಳವಾರ ‘ಹೊರಬೀಡು’ ಆಚರಣೆ ನಡೆಯಿತು. ಸಂಪ್ರದಾಯದಂತೆ ಊರಿನ ಜನರು ಬೆಳಿಗ್ಗೆ 10 ಗಂಟೆಯೊಳಗೆ ಮನೆಗಳಿಗೆ ಬೀಗ ಹಾಕಿ ಊರಿನ ಹೊರವಲಯಕ್ಕೆ ತೆರಳಿ, ಸಂಜೆ 4 ಗಂಟೆಯ ನಂತರ ಮನೆಗೆ ಮರಳುವ ಪದ್ಧತಿ ಅನುಸರಿಸಿದ್ದರು. ಈ ವೇಳೆ ಮನೆಗಳು ಖಾಲಿ ಇರುವುದನ್ನೇ ಹೊಂಚು ಹಾಕಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಅಂಬೇಡ್ಕರ್ ಓಣಿಯ ನಿವಾಸಿ ಸಂಗೀತಾ ಚಲವಾದಿ ಅವರು ಕೂಡ ಸಂಪ್ರದಾಯದಂತೆ ಮನೆಗೆ ಬೀಗ ಹಾಕಿ ದೇವಿಯ ಹೊರಬೀಡು ಆಚರಣೆಗೆ ತೆರಳಿದ್ದರು. ಈ ಸಮಯದಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಟ್ರೆಶರಿಯಲ್ಲಿ ಇಡಲಾಗಿದ್ದ ಸುಮಾರು 15 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಮುಂಡಗೋಡು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮನೆ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಕಷ್ಟಪಟ್ಟು ದುಡಿದು ಸಂಗ್ರಹಿಸಿದ್ದ ಬಂಗಾರ ಕಳುವಾಗಿರುವುದರಿಂದ ಸಂಗೀತಾ ಚಲವಾದಿ ಅವರ ಕುಟುಂಬ ತೀವ್ರ ನೋವು ವ್ಯಕ್ತಪಡಿಸಿದೆ. “ದೇವಿಯ ನಂಬಿಕೆಯ ದಿನವೇ ಈ ರೀತಿ ಆಗಿರುವುದು ಮನಸ್ಸಿಗೆ ನೋವು ತಂದಿದೆ” ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ದೇವಿಯ ಜಾತ್ರೆಯ ಸಂಭ್ರಮದ ನಡುವೆ ನಡೆದ ಈ ಕಳ್ಳತನ ಘಟನೆ ಊರಿನಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಿಸಿದೆ.




